ಜೆರುಸಲೇಂ, ಜೂ. 20 – ಗಾಜಾದ ಹಮಾಸ್ ಉಗ್ರವಾದಿ ಸಂಘಟನೆಯನ್ನು ನಾಶಗೊಳಿಸಲು ನೀಡಲಾದ ಗುರಿಯನ್ನು ಇಸ್ರೇಲ್ ಸೈನ್ಯದ ಮುಖ್ಯ ವಕ್ತಾರರು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಇದರಿಂದಾಗಿ ದೇಶದ ರಾಜಕೀಯ ಹಾಗೂ ಸೈನಿಕ ನಾಯಕತ್ವದ ನಡುವಿನ ಒಡಕು ಮೊದಲ ಬಾರಿಗೆ ಬಹಿರಂಗವಾಗಿದೆ.
ಹಮಾಸ್ ವಿರುದ್ಧದ ಹೋರಾಟ ಮುಂದುವರೆಸಲಾಗುವುದು ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಪ್ಯಾಲೆಸ್ತೇನ್ನ ಸೈನಿಕ ಹಾಗೂ ಆಡಳಿತ ಸಾಮರ್ಥ್ಯ ಅಂತ್ಯಗೊಳ್ಳುವವರೆಗೂ ಗಾಜಾ ಪಟ್ಟಿಗೆ ಮುತ್ತಿಗೆ ಮುಂದು ವರೆಸಲಾಗುವುದು ಎಂದು ನೇತನ್ಯಾಹು ಹೇಳಿದ್ದರು. ಆದರೆ, ಯುದ್ಧ ಆರಂಭವಾಗಿ ಒಂಭತ್ತು ತಿಂಗಳಾದರೂ ಇಸ್ರೇಲ್ ಗುರಿ ಈಡೇರಿಲ್ಲ. ಇದರಿಂದಾಗಿ ಮುಂದಿನ ಹೆಜ್ಜೆಯ ಬಗ್ಗೆ ಹತಾಶೆಯ ಮಾತುಗಳು ಕೇಳಿ ಬರುತ್ತಿವೆ.
ಸಮರದ ಬಗ್ಗೆ ಮಾತನಾಡಿರುವ ಸೈನ್ಯದ ವಕ್ತಾರ ರಿಯರ್ ಅಡ್ಮಿರಲ್ ಡೇನಿಯರ್ ಹಗರಿ, ಹಮಾಸ್ ನಾಶಗೊಳಿಸುವ ಇಲ್ಲವೇ ಹಮಾಸ್ ನಿರ್ನಾಮಗೊಳಿಸುವ ಮಾತುಗಳು ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿದಂತೆ. ಹಮಾಸ್ ಒಂದು ವಿಚಾರವಾಗಿದೆ, ಹಮಾಸ್ ಒಂದು ಪಕ್ಷವಾಗಿದೆ. ಅದು ಗಾಜಾದ ಜನರ ಹೃದಯಲ್ಲಿ ಬೇರು ಬಿಟ್ಟಿದೆ. ನಾವು ಹಮಾಸ್ ನಾಶಗೊಳಿಸಬಹುದು ಎಂದು ಯಾರಾದರೂ ಯೋಚಿಸಿದರೆ ಅದು ತಪ್ಪಾಗುತ್ತದೆ ಎಂದಿದ್ದಾರೆ.
ಹಮಾಸ್ ಸೈನಿಕ ಹಾಗೂ ಆಡಳಿತ ಸಾಮರ್ಥ್ಯ ನಾಶಗೊಳಿಸುವುದು ಸಮರದ ಗುರಿಗಳಲ್ಲಿ ಒಂದಾಗಿದೆ. ಇಸ್ರೇಲ್ ಸೈನ್ಯ ಇದಕ್ಕೆ ಬದ್ಧವಾಗಿದೆ ಎಂದು ನೇತನ್ಯಾಹು ಅವರ ಕಚೇರಿ ಪ್ರತಿಕ್ರಿಯಿಸಿದೆ.
ನಂತರ ಸ್ಪಷ್ಟನೆ ನೀಡಿರುವ ಸೈನ್ಯ, ಇಸ್ರೇಲ್ ಸಮರ ಸಂಪುಟ ನಿಗದಿ ಪಡಿಸಿರುವ ಗುರಿ ತಲುಪಲು ಬದ್ಧವಾಗಿದ್ದೇವೆ. ಸಮರದ ಉದ್ದಕ್ಕೂ ಈ ಗುರಿ ತಲುಪಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದೆ.
ಹಮಾಸ್ ಸಿದ್ಧಾಂತ ಹಾಗೂ ವಿಚಾರವನ್ನು ನಾಶಗೊಳಿಸುವ ಬಗ್ಗೆ ಮಾತ್ರ ಹಗರಿ ಹೇಳಿಕೆ ನೀಡಿದ್ದಾರೆ. ಇದನ್ನು ಮೀರಿ ಅರ್ಥೈಸುವುದು ತಪ್ಪಾಗುತ್ತದೆ ಎಂದು ಸೈನ್ಯ ತಿಳಿಸಿದೆ.
ಯುದ್ಧದ ಬಗ್ಗೆ ನೇತನ್ಯಾಹು ಸರ್ಕಾರದಲ್ಲಿ ಒಡಕಿನ ಸಂಕೇತಗಳು ಸ್ಪಷ್ಟವಾಗಿವೆ. ಇಸ್ರೇಲ್ ಸರ್ಕಾರದ ಮೈತ್ರಿಕೂಟದಲ್ಲಿರುವ ಬಲಪಂಥೀಯರು ಹಮಾಸ್ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದನ್ನು ವಿರೋಧಿಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಸಂಧಾನದ ಬಗ್ಗೆ ಮುಂದಿಟ್ಟಿದ್ದ ಪ್ರಸ್ತಾಪವೂ ಯಾವುದೇ ಫಲ ನೀಡಿಲ್ಲ.
ನಡು ಪಂಥೀಯರಾದ ಸೈನ್ಯದ ಮಾಜಿ ಮುಖ್ಯಸ್ಥ ಬೆನ್ನಿ ಗಾಂಟ್ಜ್ ಅವರು ಈ ತಿಂಗಳ ಆರಂಭದಲ್ಲಿ ಸಮರ ಸಂಪುಟದಿಂದ ಹೊರ ಬಿದ್ದಿದ್ದರು. ಯುದ್ಧ ಮುಂದುವರೆಸಲು ಪ್ರಧಾನಿ ನೇತನ್ಯಾಹು ನಿರ್ಧರಿಸಿರುವ ಬಗ್ಗೆ ಅವರು ಹತಾಶೆ ವ್ಯಕ್ತಪಡಿಸಿದ್ದರು. ಗಾಜಾದ ದಕ್ಷಿಣದಲ್ಲಿನ ರಫಾದಲ್ಲಿ ಮಾನವೀಯ ನೆರವಿಗಾಗಿ ಇಸ್ರೇಲ್ ಸೈನ್ಯ ಹೋರಾಟ ನಿಲ್ಲಿಸಿತ್ತು. ಸೈನ್ಯದ ಈ ಕ್ರಮದ ಬಗ್ಗೆ ನೇತನ್ಯಾಹು ಅಸಮಾಧಾನ ವ್ಯಕ್ತಪಡಿಸಿದ್ದರು.
ಗಾಜಾದ 23 ಲಕ್ಷ ಜನರ ಪೈಕಿ ಅರ್ಧದಷ್ಟು ಜನರು ರಫಾದಲ್ಲಿ ಆಶ್ರಯ ಪಡೆದಿದ್ದರು. ಇದು ಇಸ್ರೇಲ್ ಗಡಿಗೆ ಹೊಂದಿಕೊಂಡಿದೆ. ರಫಾದಲ್ಲಿ ಸೈನ್ಯ ಕಾರ್ಯಾಚರಣೆ ಆರಂಭಿಸಿದ ನಂತರ ಈ ನಗರ ಬಹುತೇಕ ಖಾಲಿಯಾಗಿದೆ.
ಗಾಜಾ ಹಾಗೂ ಈಜಿಪ್ಟ್ ಗಡಿಯ 14 ಕಿ.ಮೀ. ಪ್ರದೇಶವನ್ನು ಇಸ್ರೇಲ್ ವಶಕ್ಕೆ ತೆಗೆದುಕೊಂಡಿದೆ. ಮಾನವೀಯ ನೆರವು ನೀಡುವ ಹಾಗೂ ಪ್ಯಾಲೆಸ್ತೇನ್ ಜನರು ಈ ಪ್ರಾಂತ್ಯದಿಂದ ಹೊರ ಹೋಗುವ ಮಾರ್ಗ ಈಗ ಬಂದ್ ಆಗಿದೆ.
ನಗರದ ಶೇ.70ರಷ್ಟು ಮೂಲಭೂತ ಸೌಲಭ್ಯಗಳನ್ನು ಇಸ್ರೇಲ್ ನಾಶಗೊಳಿಸಿದೆ ಎಂದು ರಫಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥ ಅಹಮದ್ ಅಲ್ ಸೂಫಿ ಹೇಳಿದ್ದಾರೆ.