ದಾವಣಗೆರೆ, ಜೂ. 19- ಚಿತ್ರನಟ ದರ್ಶನ್ ಅವರ ಚಾಮರಾಜನಗರದ ಫಾರಂ ಹೌಸ್ ಕೆಲಸಗಾರ ಮಹೇಶ್ ಎಂಬ ವ್ಯಕ್ತಿಗೆ ಎತ್ತು ತಿವಿದು, ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ.
ಆತನ ಕಷ್ಟ ನೋಡಿ ರೈತ ಮುಖಂಡ ನಾಗೇಶ್ವರ ರಾವ್ ಅವರು ಮತ್ತವರ ಸ್ನೇಹಿತರು ಸೇರಿ 25 ಸಾವಿರ ರೂ.ಗಳನ್ನು ಮಹೇಶ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ನಟ ದರ್ಶನ್ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ನೋಡುವಾಗ ಚಾಮರಾಜನಗರ ಫಾರಂಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಎಂಬಾತನಿಗೆ ಆಗಿರುವ ಅನ್ಯಾಯದ ಬಗ್ಗೆ ತೀವ್ರ ನೋವುಂಟಾಗಿದೆ.
ಎತ್ತು ತಿವಿದ ಪರಿಣಾಮ ಮಹೇಶ್ ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆಗೆ ಸಹಾಯ ಕೇಳಿದರೆ ನಟ ದರ್ಶನ್ ನಾಯಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಇದು ಖಂಡನೀಯ ಎಂದರು.
ದರ್ಶನ್ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಒಬ್ಬೊಬ್ಬರು ಒಂದು ರೂಪಾಯಿ ನೀಡಿದರೆ ಮಹೇಶ್ ಚಿಕಿತ್ಸೆಗೆ ಕೋಟಿ ರೂಪಾಯಿ ಆಗುತ್ತದೆ. ಆದ್ದರಿಂದ ಅಭಿಮಾನಿಗಳು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್. ಚಂದ್ರಶೇಖರ್, ಪುಟ್ಟರಾಜು ಉಪಸ್ಥಿತರಿದ್ದರು.