ಜನತಾದರ್ಶನ ಮಾಡಿ ಸಮಸ್ಯೆ ಪರಿಹಾರಕ್ಕೆ ಯತ್ನ

ಜನತಾದರ್ಶನ ಮಾಡಿ ಸಮಸ್ಯೆ ಪರಿಹಾರಕ್ಕೆ ಯತ್ನ

ಪ್ರಾಮಾಣಿಕವಾಗಿ ಕೆಲಸ ಮಾಡಿ ವಿಶ್ವಾಸ ಉಳಿಸಿಕೊಳ್ಳುವೆ: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಜೂ.18- ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ನನ್ನನ್ನು ಬೆಂಬಲಿಸಿದ್ದೀರಿ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.

ಮಾವನವರು ಹಾಗೂ ಪತಿ ಮಲ್ಲಿಕಾರ್ಜುನ್ ಅವರುಗಳ ದೂರದೃಷ್ಟಿ, ರಾಜಕೀಯ ಅನುಭ‍ವ ಬಳಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇನೆ. ಶೀಘ್ರವೇ ಜನತಾ ದರ್ಶನ ಮಾಡಿ ಶಾಸಕರು, ಸ್ಥಳೀಯ ಮುಖಂಡರು, ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ, ನೀರಾವರಿ, ರೈತರು, ಗ್ರಾಮೀಣರ ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ. ಎಸ್ಸೆಸ್ ಕೇರ್ ಟ್ರಸ್ಟ್ ಸೇವೆ ಕೇವಲ ನಗರ, ಗ್ರಾಮೀಣ ಭಾಗಕ್ಕೆ ಮಾತ್ರ ಸೀಮಿತವಿತ್ತು. ಇನ್ಮುಂದೆ ಇಡೀ ಜಿಲ್ಲೆಗೆ ವಿಸ್ತರಿಸುತ್ತೇವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್‌ ಘೋಷಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಶಾಸಕರೂ ಆದ ಡಾ. ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ,  ಕೇಂದ್ರದಲ್ಲಿ ನಮ್ಮ ಅಧಿಕಾರ ಇದ್ದರೆ ನಾವು ಕೆಲಸ ಮಾಡುತ್ತೇವೆಂದು ಗ್ಯಾರಂಟಿಯಾಗಿ ಹೇಳಬಹುದಿತ್ತು. ಅಡಚಣೆ ಬರಲ್ಲವೆಂದು ಹೇಳಬಹುದಿತ್ತು. ಎರಡು ದಂಡೆ ಮೇಲೆ ಕೈ ಇಟ್ಟಿದ್ದೇವೆ. ಸೂಕ್ಷ್ಮವಾಗಿ ಸಂಸದೆ ಪ್ರಭಾ ಕೆಲಸ ಮಾಡಬೇಕಿದೆ ಎಂದರು.

ದಾವಣಗೆರೆಯಲ್ಲಿ ಮೊದಲು ಒಂದೂ ಸಿಮೆಂಟ್ ರಸ್ತೆಗಳಿರಲಿಲ್ಲ. ಕೇಶವಮೂರ್ತಿ ಅವರು ಎರಡ್ಮೂರು ಸಿಮೆಂಟ್ ರಸ್ತೆಗಳನ್ನು ಮಾಡಿದ್ದರು. ಅದಾದ ಮೇಲೆ ಬರೀ ಡಾಂಬರ್ ರಸ್ತೆಗಳೇ ಇದ್ದವು. ಒಂದು ವರ್ಷದ ಮಳೆಗೆ ಹಾನಿಯಾಗುತ್ತಿತ್ತು. ಆದರೆ ಇಂದು ಎಲ್ಲಾ ಸಿಮೆಂಟ್ ರಸ್ತೆಗಳಾಗಿವೆ. ಒಂದೊಂದಾಗಿ ದೂರ ದೃಷ್ಟಿಯ ಕೆಲಸಗಳಾಗುತ್ತಿವೆ ಎಂದು ಎಸ್ಸೆಸ್ ಹೇಳಿದರು.

ನನ್ನ ಹಾಗೂ ಪುತ್ರ ಮಲ್ಲಿಕಾರ್ಜುನ್ ಸಲಹೆ, ಮಾರ್ಗದರ್ಶನದಲ್ಲಿ ಕ್ಷೇತ್ರದ ಜನತೆಯ ಅಭಿಮಾನಕ್ಕೆ ಕುಂದು ಬಾರದಂತೆ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾದ ಮೇಲೆ ಆ ಸ್ಥಾನಕ್ಕೊಂದು ಗೌರವ ಬಂದಿದೆ. ಲಿಂಗಾಯತ-ವೀರಶೈವ ಇಬ್ಬಾಗವಾಗುವ ಸ್ಥಿತಿ ನಿರ್ಮಾಣವಾಗಿದ್ದಾಗ ಅಧಿಕಾರ ಮುಖ್ಯವಲ್ಲ. ಸಮಾಜ ಮುಖ್ಯ ಎಂದು ಹೇಳಿ, ಸಮಾಜ ಒಡೆಯವುದನ್ನು ತಪ್ಪಿಸಿದವರು ಶಿವಶಂಕರಪ್ಪನವರು.

ಸಾಮಾನ್ಯವಾಗಿ ಕರ್ಣನನ್ನು ದಾನಶೂರ ಎನ್ನುತ್ತೇವೆ. ಕರ್ಣ ಕೇಳಿದಾಗ ದಾನ ಕೊಟ್ಟಿದ್ದಾನೆ. ಆದರೆ ಶಿವಶಂಕರಪ್ಪನವರು  ಅಗತ್ಯವಿದ್ದವರಿಗೆ ಕೇಳದೇ ನೆರವು ನೀಡಿದ್ದಾರೆ. ಅವರು ಅಪಾರ ದೈವಭಕ್ತರೂ ಆಗಿದ್ದಾರೆ ಎಂದರು.

ಪ್ರಭಾ ಮಲ್ಲಿಕಾರ್ಜುನ್ ಸಹ ಸಾಮಾಜಿಕ ಕಳಕಳಿ ಉಳ್ಳವರು. ವಿದ್ಯೆ, ಶ್ರೀಮಂತಿಕೆ ಜೊತೆಗೆ ಅವರಲ್ಲಿರುವ ಸಂಸ್ಕಾರವನ್ನು ನಾವೆಲ್ಲಾ ನೋಡಿ ಕಲಿಯಬೇಕಿದೆ.  ಅವರಿಗೆ ಬಡವರ ಬಗ್ಗೆ ಕಳಕಳಿ ಇದೆ. ಸೇವಾ ಮನೋಭಾವವಿದೆ. ದಾವಣಗೆರೆ ಅಭಿವೃದ್ಧಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದರು.

ದಾವಣಗೆರೆಗೆ ವಿಮಾನ ನಿಲ್ದಾಣ ಅತ್ಯಗತ್ಯವಿದೆ. ವೀರಶೈವ ಸಮಾಜದ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಮಾಡಿದರೆ ಅನುಕೂಲವಾಗುತ್ತದೆ. ಒಬಿಸಿ ಮೀಸಲಾತಿಯಿಂದ ಸಮಾಜದ ಬಡ ಮಕ್ಕಳಿಗೆ ಉದ್ಯೋಗ, ಶಿಕ್ಷಣಕ್ಕೆ ಅನುಕೂಲವಾಗುತ್ತದೆ.  ಎಲ್ಲಾ ಶಾಸಕರು, ಸಂಸದರು ವೀರಶೈವ ಲಿಂಗಾಯತ ಸಮಾಜವನ್ನು ಒಬಿಸಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಸಹ ಕಾರ್ಯೋನ್ಮುಖರಾಗಲಿ ಎಂದು ಆಶಿಸಿದರು.

ಅಭಾವೀಮ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ದಾವಣಗೆರೆಯಲ್ಲಿ  ಅಶೋಕ ಚಿತ್ರಮಂದಿರದ ಹಾಗೂ ಅರುಣ ಚಿತ್ರಮಂದಿರದ ಬಳಿ ರೈಲ್ವೇ ಕೆಳ ಸೇತುವೆಗಳು ಉತ್ತಮವಾಗಿ ನಿರ್ಮಾಣವಾಗಬೇಕಿದೆ. ಆ ವಿಷಯದ ಬಗ್ಗೆ ಪ್ರಭಾ ಮಲ್ಲಿಕಾರ್ಜುನ್ ಆದ್ಯತೆ ನೀಡಬೇಕು ಎಂದರು.

ಹಿಂದೆ ತಾವು ವಿಧಾನ ಪರಿಷತ್ ಚುನಾವಣೆಗೆ ನಿಂತಾಗ ಆದ ಅನುಭವಗಳಿಂದಾಗಿ ರಾಜಕೀಯ ಸಹವಾಸವೇ ಸಾಕೆಂದು ಕೈಮುಗಿದು ಬಿಟ್ಟೆ. ದಾವಣಗೆರೆ, ಚಿತ್ರದುರ್ಗ, ಕೋಲಾರ, ತುಮಕೂರು ಒಳಗೊಂಡ ವಿ.ಪ. ಚುನಾವಣೆ ಅದು. ನನ್ನ ವಿರುದ್ಧ ಬಿಜೆಪಿಯ ಮಲ್ಲಿಕಾರ್ಜುನಯ್ಯ ಸ್ಪರ್ಧಿಸಿ ಗೆದ್ದಿದ್ದರು ಎಂದರು.

ಚುನಾವಣೆ ವೇಳೆ ಯಾರೋ ಪುಣ್ಯಾತ್ಮ ಉರ್ದುವಿನಲ್ಲೂ ಕರಪತ್ರ ಮಾಡಿಸುವಂತೆ ಹೇಳಿದ್ದ. ಅದರಂತೆ ಮಾಡಿಸಿದ್ದೆವು ಸಹ. ನಂತರ ವೇದಿಕೆ ಮೇಲೆ ಆ ವ್ಯಕ್ತಿಗೆ ಹೇಗಿದೆ ಕರಪತ್ರವೆಂದು ಕೇಳಿದರೆ ಬಹುತ್ ಅಚ್ಛಾ ಹೈ ಸಾಹೇಬ್ ಅಂದು. ಇಳಿದು ಹೋದ. ಪಕ್ಕದಲ್ಲಿದ್ದ ಮತ್ತೊಬ್ಬರಿಗೆ ಕೇಳಿದಾಗ ಆತನಿಗೆ ಉರ್ದು ಓದುವುದಕ್ಕೆ ಬರುವುದಿಲ್ಲವೆಂದು ಹೇಳಿದಾಗ ನಾನು ಕಕ್ಕಾಬಿಕ್ಕಿಯಾಗಿದ್ದೆ. ಇಂತಹ ಸಾಕಷ್ಟು ಅನುಭವಗಳು ರಾಜಕೀಯದಿಂದ ದೂರವಿರಲು ನಿರ್ಧರಿಸಿದೆ ಎಂದರು.

ಮತ್ತೋರ್ವ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,  ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆಯಾಗಿ 120 ವರ್ಷಗಳಾಗಿವೆ. ಅನೇಕ ಮಹನೀಯರು ಅಧ್ಯಕ್ಷರಾಗಿದ್ದಾರೆ. ಭೀಮಣ್ಣ ಖಂಡ್ರೆಯವರು ಮಹಾಸಭಾವನ್ನು ಎತ್ತರಕ್ಕೆ ಬೆಳೆಸಿದರು.  ಕಳೆದ ಹತ್ತು ವರ್ಷಗಳಿಂದ ರಾಜ್ಯದಾದ್ಯಂತ ಮಹಾಸಭಾ ಇದೆ ಎಂದು ಗೊತ್ತಾದದ್ದೇ ಶಾಮನೂರು ಶಿವಶಂಕರಪ್ಪನವರು ಅಧ್ಯಕ್ಷರಾದ ಮೇಲೆ ಎಂದರು. ವೀರಶೈವ ಲಿಂಗಾಯತರಿಗೆ ಶಿವಶಂಕರಪ್ಪನವರು ದೊಡ್ಡ ಶಕ್ತಿಯಾಗಿದ್ದಾರೆ ಎಂದರು.

ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸ್ಕಾರವಂತರು. ಗಟ್ಟಿ ನಿರ್ಧಾರ ಮಾಡಿ ರಾಜಕೀಯ ಪ್ರವೇಶಿಸಿ ಬಿಜೆಪಿ  ಭದ್ರ ಕೋಟಿ ಮೆಟ್ಟಿ ನಿಂತಿದ್ದಾರೆ. ಸಮಾಜ ಅವರನ್ನು ಸ್ವಾಗತಿಸುತ್ತದೆ ಎಂದರು.

ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಅಭಿನಂದನಾ ನುಡಿಗಳನ್ನಾಡಿದರು. ಐಗೂರು ಚಂದ್ರಶೇಖರ್ ನೂತನ ಸಂಸದರ ಪರಿಚಯ ಮಾಡಿಕೊಟ್ಟರು. ಸೌಮ್ಯ ಸತೀಶ್ ಪ್ರಾರ್ಥಿಸಿದರು.

error: Content is protected !!