ಹರಿಹರ, ಜೂ.18- ಪೆಟ್ರೋಲ್, ಡೀಸೆಲ್ ದರ ಏರಿಕೆ ಕ್ರಮವನ್ನು ಖಂಡಿಸಿ ನಗರದ ಆಟೋ ಮಾಲೀಕರು ಮತ್ತು ಚಾಲ ಕರ ಸಂಘ ಹಾಗೂ ರಕ್ಷಣಾ ವೇದಿಕೆ ವತಿ ಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಹಾಗೂ ರಕ್ಷಣಾ ವೇದಿಕೆಯ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಡೀಸೆಲ್ ದರವನ್ನು 3.5, ಪೆಟ್ರೋಲ್ ದರವನ್ನು 3 ರೂಪಾಯಿ ಹೆಚ್ಚಿಸಿ, ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಹಿಂದೆ ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಶುಲ್ಕ, ಅಬಕಾರಿ ತೆರಿಗೆ ಸೇರಿದಂತೆ, ಮುದ್ರಾಂಕ ಶುಲ್ಕ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕುವಂತಹ ಕೆಲಸವನ್ನು ಮಾಡಿತ್ತು. ಈಗ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಗೆ ಮಾಡಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವುದರಿಂದ ಬಡ ಜನತೆ ಇನ್ನೂ ತೊಂದರೆಗೊಳಗಾಗಬೇಕಾಗುತ್ತದೆ.
ಸರ್ಕಾರ ಗ್ಯಾರಂಟಿ ಹೆಸರನ್ನು ಹೇಳಿಕೊಂಡು ಬಡವರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಮಾಡಲು ಹೊರಟಿದೆ, ಭೀಕರ ಬರದಿಂದ ತತ್ತರಿಸಿರುವ ರೈತರಿಗೆ ಸದ್ಯಕ್ಕೆ ಉತ್ತಮ ಮಳೆಯಾಗಿರುವುದರಿಂದ ಜಮೀನು ಹಸನು ಮಾಡಿಕೊಂಡಿದ್ದಾರೆ. ರೈತರಿಗೆ ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ ದರ ಹೆಚ್ಚಳ ಮಾಡಿ ಶಾಕ್ ನೀಡಿರುವುದನ್ನು ರೈತರು ಸುಧಾರಿಸಿಕೊಳ್ಳುವುದರಲ್ಲಿ ಈಗ ಮತ್ತೆ ಇಂಧನ ಬೆಲೆ ಏರಿಕೆ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ. ಹಾಗಾಗಿ ಬೆಲೆ ಏರಿಕೆಯನ್ನು ಹಿಂಪಡೆಯುವ ಮೂಲಕ, ರಾಜ್ಯದ ಜನರು ನೆಮ್ಮದಿ ಜೀವನ ಮಾಡುವು ದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಒಂದು ವೇಳೆ ಈ ಹಠಮಾರಿ ಧೋರಣೆ ಯನ್ನು ಕೈ ಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ರಕ್ಷಣಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರು ಇತರರು ಹಾಜರಿದ್ದರು.