ಸುಗಮ ಸಂಗೀತ ಕನ್ನಡದ ಅಸ್ಮಿತೆ

ಸುಗಮ ಸಂಗೀತ ಕನ್ನಡದ ಅಸ್ಮಿತೆ

`ಸ್ವರಾಭರಣ’ ಸಮಾರೋಪದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

ದಾವಣಗೆರೆ, ಜೂ.17- ಕರ್ನಾಟಕದಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಸುಗಮ ಸಂಗೀತವೆಂದರೆ ಅದೊಂದು ತಪಸ್ಸು,  ಒಂದು ಟಾನಿಕ್ ಇದ್ದಂತೆ. ಕನ್ನಡದ ಅಸ್ಮಿತೆಯೇ ಸುಗಮ ಸಂಗೀತ ಎಂದು ಖ್ಯಾತ ಗಾಯಕ, ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಬೆಂಗಳೂರು, ಅನುಶ್ರೀ ಸಂಗೀತ ಶಾಲೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ `ಸ್ವರಾಭರಣ’ ಸ್ಥಳೀಯ ಕವಿಗಳ ಪದ್ಯಗಾಯನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡವನ್ನು ಹೊರತುಪಡಿಸಿ ಬೇರೆ ಯಾವ ಭಾಷೆಯಲ್ಲೂ ಸುಗಮ ಸಂಗೀತದ ಪ್ರಾಕಾರ ಇಲ್ಲ. ಜಗತ್ತಿನಲ್ಲಿ ಅಹಂಕಾರವಿಲ್ಲದ ಏಕೈಕ ಮಾಧ್ಯಮ. ಸುಗಮ ಸಂಗೀತ ಕೇಳಲು ಇಂಪು. ಆದರೆ ಹಾಡುವುದು ಅಷ್ಟೇ ಕಷ್ಟ. ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ನ್ಯೂಸ್ ಚಾನೆಲ್‌, ಟಿವಿ ಧಾರಾವಾಹಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಮಕ್ಕಳಲ್ಲಿ ಸುಗಮ ಸಂಗೀತದಲ್ಲಿ ಆಸಕ್ತಿ ಮೂಡಿಸುವ ಅಗತ್ಯವಿದೆ. ದಾವಣಗೆರೆ ಸುಗಮ ಸಂಗೀತ ಪರಿಷತ್ ಸುಗಮ ಸಂಗೀತಕ್ಕೆ ಹೊಸ ಪರಿಕಲ್ಪನೆ ನೀಡಿರುವುದು ಸಂತಸದ ವಿಚಾರ ಎಂದು ಹೇಳಿದರು.

`ಕವಿಯ ನುಡಿ, ಕವಿತೆ ಕೇಳಿ’ ಎನ್ನುವ ವಿನೂತನ ಕಾರ್ಯಕ್ರಮಕ್ಕೆ ದಾವಣಗೆರೆಯಿಂದಲೇ ಚಾಲನೆ ನೀಡಬೇಕೆಂಬ ಆಸೆ ನನ್ನದು. ದಾವಣಗೆರೆ ಮೇಲೆ ಬೆಣ್ಣೆದೋಸೆಯಷ್ಟೇ ಪ್ರೀತಿ ಇದೆ ಎಂದ ಅವರು ದಾವಣಗೆರೆ ಗಣೇಶ್ ಶೆಣೈ ಹಾಗೂ ಮೈಸೂರಿನ ನಾಗರಾಜ್ ಅವರ ಸಂಗೀತ ಕ್ಷೇತ್ರದ ಸೇವೆಯನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಸಾಹಿತ್ಯ ಪ್ರಾಕಾರದಲ್ಲಿ `ಸಂಗೀತ’ ಉತ್ಕೃಷ್ಟ ಕಲೆಯಾಗಿದ್ದು, ಜನರ ಮನಸ್ಸನ್ನು ಹಿಡಿದಿಡುವ ಮಾಂತ್ರಿಕ ಶಕ್ತಿ ಸುಗಮ ಸಂಗೀತಕ್ಕಿದೆ. ಮನಸ್ಸನ್ನು ಉನ್ಮಾದಗೊಳಿಸುವ, ಆರೋಗ್ಯವನ್ನು ವೃದ್ಧಿಸುವ ಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.

ದಾವಣಗೆರೆಯಲ್ಲಿ `ಸ್ವರಾಭರಣ’ ಕಾರ್ಯಕ್ರಮ ಸಂಗೀತದ ಬಗ್ಗೆ ಅಭಿರುಚಿ ಮೂಡಿಸುವಂತಹ ಕೆಲಸ ಮಾಡಿದ್ದು,  ಅನುಶ್ರೀ ಸಂಗೀತ ಪಾಠಶಾಲೆ ಸಂಗೀತ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಪ್ರವೀಣ್, ಖಜಾಂಚಿ ಪ್ರಶಾಂತ ಉಡುಪ, ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಶಾಂತಾ ಎಸ್. ಶೆಟ್ಟಿ, ಮಂಡ್ಯ ಜಿಲ್ಲಾಧ್ಯಕ್ಷ ಡೇವಿಡ್ ಪ್ರತಿಭಾಂಜಲಿ, ಅನುಶ್ರೀ ಸಂಗೀತ ಪಾಠಶಾಲೆ ಸಂಸ್ಥಾಪಕರಾದ ವೀಣಾ ಸದಾನಂದ ಹೆಗಡೆ, ಕಲಾ ಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. 

ಅನುಶ್ರೀ ಸಂಗೀತ ಪಾಠಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೆ.ಸಿ. ಉಮೇಶ್ ಸ್ವಾಗತಿಸಿದರು. ಗಣೇಶ್ ಶೆಣೈ ನಿರೂಪಿಸಿದರು. ನಂತರ ಅನುಶ್ರೀ ಸಂಗೀತ ಶಾಲೆ ವಿದ್ಯಾರ್ಥಿನಿಯರಿಂದ ಪದ್ಯಗಾಯನ ಕಾರ್ಯಕ್ರಮ ನೆರವೇರಿತು.

error: Content is protected !!