ಹರಿಹರದಲ್ಲಿ ಸಡಗರದ ಬಕ್ರೀದ್ ಆಚರಣೆ

ಹರಿಹರದಲ್ಲಿ ಸಡಗರದ ಬಕ್ರೀದ್ ಆಚರಣೆ

ಹರಿಹರ, ಜೂ. 17 – ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಧಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಸಮಾಜ ಬಾಂಧವರು ತಾಲ್ಲೂಕಿನಾದ್ಯಂತ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ನಗರದಲ್ಲಿ ಬೆಳಿಗ್ಗೆ ಅಹ್ಲೆ ಸುನ್ನತ್ ಪಂಗಡದವರು ಅಂಜುಮನ್ ಕಾಲೇಜ್ ಮುಂಭಾಗದ ಈದ್ಗಾ ಮೈದಾನದಲ್ಲಿ, ಅಹ್ಲೆ ಹದೀಸ್ ಪಂಗಡದವರು ಜೈಭೀಮ ನಗರದ ಈದ್ಗಾ ಮೈದಾನದಲ್ಲಿ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಹ್ಲೆ ಹದೀಸ್ ಈದ್ಗಾ ಮೈದಾನದಲ್ಲಿ ನೂರಾರು ಮಹಿಳೆಯರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಪ್ರವಚನ ನೀಡಿದ ಮೌಲಾನಾರವರು, ಅಲ್ಲಾಹನ ಇಚ್ಚೆಯಂತೆ ಪ್ರವಾದಿ ಇಬ್ರಾಹೀಮರು ತಮ್ಮ ಇಳಿವಯಸ್ಸಿನಲ್ಲಿ ಪುತ್ರ ಇಸ್ಮಾಯಿಲರನ್ನು ಬಲಿ ಕೊಡಲು ಸಿದ್ಧರಾದರು. ಆ ಘಟನೆಯ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.

ಪ್ರಾಣಿ ಬಲಿ ಕೊಡುವುದು ಇಲ್ಲಿ ಸಾಂಕೇತಿಕವಾಗಿದೆ. ಅಗತ್ಯ ಬಿದ್ದಾಗ ನೆರೆ,ಹೊರೆ, ನಾಡು, ದೇಶ, ಧರ್ಮ, ಮಾನವ ಕುಲಕ್ಕಾಗಿ ಧನ, ಸಮಯ, ಶಕ್ತಿ, ಸಾಮಥ್ರ್ಯ, ಸಂಪನ್ಮೂಲಗಳ ತ್ಯಾಗ ಮಾಡಬೇಕೆಂಬುದು ಹಬ್ಬದ ತಿರುಳಾಗಿದೆ ಎಂದರು.

ನಾವು ತಿಂದುಂಡು ಪಕ್ಕದ ಮನೆಯವರು ಹಸಿದಿದ್ದರೆ ಸೃಷ್ಟಿಕರ್ತ ನಮ್ಮ ಬದುಕನ್ನು ಮೆಚ್ಚನು. ಯಾವುದೆ ಜಾತಿ, ಧರ್ಮಕ್ಕೆ ಸೇರಿದ್ದರೂ ಸರಿ ಹಸಿದವರ ಹಸಿವು, ಕೊರತೆಗಳನ್ನು ಶಕ್ತಿ ಇದ್ದವರು ನೀಗಿಸಬೇಕು. ತೊಂದರೆಯಲ್ಲಿದ್ದವರು ಮುಸ್ಲಿಮೇತರರಿದ್ದರೂ ಸಹಾಯ ಹಸ್ತ ಚಾಚಬೇಕು. ಅಂತಹವರ ತ್ಯಾಗ, ಬಲಿದಾನಗಳನ್ನು ದೇವರು ಮೆಚ್ಚುತ್ತಾನೆ ಎಂದು ಹೇಳಿದರು.

 ಪ್ರಾರ್ಥನೆಗೆ ಮುನ್ನ ಆಯಾ ಮಸೀದಿಗಳಿಂದ ಜನರು ಗುಂಪಾಗಿ ಧಾರ್ಮಿಕ ಕೀರ್ತನೆಗಳನ್ನು ಪಠಿಸುತ್ತಾ ಈದ್ಗಾ ಮೈದಾನದತ್ತ ಸಾಗಿದರು. ಹೊಸ ಬಟ್ಟೆ ತೊಟ್ಟ ಮಕ್ಕಳು ಸಂಭ್ರಮಿಸಿದರು. ಅಂಜುಮನ್-ಎ-ಇಸ್ಲಾಮಿಯಾ ಸಂಸ್ಥೆ ಪದಾಧಿಕಾರಿಗಳು, ಸಮುದಾಯದ ನಗರಸಭಾ ಸದಸ್ಯರು, ಮುಖಂಡರು ಇದ್ದರು. ವಿವಿಧ ಪಕ್ಷಗಳ ಮುಖಂಡರು ಸ್ಥಳಕ್ಕೆ ಆಗಮಿಸಿ ಶುಭ ಕೋರಿದರು.   ಎರಡೂ ಈದ್ಗಾ ಮೈದಾನಗಳಲ್ಲಿ ಮಳೆಗಾಗಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ತಾಲ್ಲೂಕಿನ ಮಲೆಬೆನ್ನೂರು, ಭಾನುವಳ್ಳಿ, ಬೆಳ್ಳೂಡಿ, ಕರಲಹಳ್ಳಿ, ರಾಜನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು, ನಂತರ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿ ಸೇವಿಸಲಾಯಿತು.

error: Content is protected !!