ಜಗಳೂರು ಶಾಸಕ ದೇವೇಂದ್ರಪ್ಪ ಭರವಸೆ
ಜಗಳೂರು, ಜೂ. 18 – ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಚುರುಕುಗೊಂಡಿದ್ದು, ಶೀಘ್ರವೇ ಜಗಳೂರು ಕೆರೆ ಸೇರಿ 33 ಕೆರೆಗಳು ಭರ್ತಿ ಆಗಲಿವೆ ಎಂದು ಶಾಸಕ ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ ಬಗ್ಗೇನಹಳ್ಳಿ ಬಳಿ ಆರು ಪೈಪ್ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಂಡರೆ ಜಗಳೂರು ಕೆರೆಗೆ ನೀರು ಬರುತ್ತದೆ. ಜಗಳೂರು ಕೆರೆಗೆ ನೀರು ಬಂದರೆ ತಾಲ್ಲೂಕಿನ ಉಳಿದ ಮೂವತ್ತಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿದುಬರುತ್ತದೆ ಎಂದು ಭರವಸೆ ನೀಡಿದರು.
ತಾಲ್ಲೂಕಿನಲ್ಲಿ 160 ಹಳ್ಳಿಗಳಿಗೆ 400 ಕೋಟಿ ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗುತ್ತಿರುವುದು ತಾಲ್ಲೂಕಿನ ಜನತೆ ಸಂತಸ ಪಡುವ ವಿಚಾರ ಈ ಯೋಜನೆಗ ಳಿಂದ ತುಂಬಾ ಅನುಕೂಲವಾಗಲಿದೆ ಎಂದು ಶಾಸಕರು ಸಂತಸ ವ್ಯಕ್ತ ಪಡಿಸಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಶೀಘ್ರ : ತಾಲ್ಲೂಕಿನಲ್ಲಿ ಎಲ್ಲಾ ಕೆರೆಗಳು ತುಂಬುತ್ತವೆ ರೈತರಿಗೆ ಅನುಮಾನ ಬೇಡ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪರಿಶೀಲಿಸುವುದಕ್ಕೆ ಶೀಘ್ರವೇ ರೈತರು ಪತ್ರಕರ್ತರೊಂದಿಗೆ ತೆರಳಿ ಕಾಮಗಾರಿ ವೀಕ್ಷಣೆ ಮಾಡಲಾಗುವುದು ಎಂದರು.
ಅಭಿವೃದ್ಧಿ ಕೆಲಸ ಚುರುಕುಗೊಳಿಸಲು ಕ್ರಮ : ತಾಲ್ಲೂಕಿನಲ್ಲಿ ನೀತಿ ಸಂಹಿತೆ ಜಾರಿಯಿಂದ ಅಭಿವೃದ್ಧಿ ಕೆಲಸಗಳಾಗಿಲ್ಲ, ಆದ್ದರಿಂದ ನೀತಿ ಸಂಹಿತೆ ಮುಗಿದ ಮರುದಿನದಿಂದಲೇ ಎಲ್ಲಾ ಅಧಿಕಾರಿಗಳೊಟ್ಟಿಗೆ ಸಭೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಂಡಿ ರಸ್ತೆ, ಜಿಪಂ ವ್ಯಾಪ್ತಿಗೆ ಒಳಪಡುವ ರಸ್ತೆಗಳು ಬಾಕ್ಸ್ ಚರಂಡಿಗಳು ಹಾಗೂ ಸಿಸಿ ರಸ್ತೆ ಹೀಗೆ ಒಟ್ಟು 10 ಕೋಟಿ ವೆಚ್ಚದಲ್ಲಿ ಕಾಮಗಾರಿ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುತ್ತದೆ. ಎಲ್ಲಾ ಪಂಚಾಯಿತಿಗಳಲ್ಲಿ ನರೇಗಾದಲ್ಲಿ ಬೇಡಿಕೆ ಇರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ನರೇಗಾ ಕೆಲಸದಲ್ಲಿ ಜಗಳೂರು ತಾಲ್ಲೂಕು ಜಿಲ್ಲೆಯಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಲ್ಲಿ, 11 ಪಿಡಿಒಗಳು ಮಾತ್ರವಿದ್ದು, 11 ಹುದ್ದೆಗಳು ಖಾಲಿ ಇವೆ. ಆದ್ದರಿಂದ ಪರ್ಯಾಯವಾಗಿ ಗ್ರಾಮೀಣಾಭಿವೃದ್ಧಿ ಕುಂಠಿತವಾಗಬಾರದು ಎಂದು ಒಬ್ಬ ಪಿಡಿಓಗೆ ಎರಡು ಪಂಚಾಯಿತಿಗಳಿಗೆ ಚಾರ್ಜ್ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಸೈಯದ್ ಕಲೀಂವುಲ್ಲಾ, ಡಾ. ವಿಶ್ವನಾಥ್, ಆಸ್ಪತ್ರೆ ಆಡಳಿತಾಧಿಕಾರಿ ಷಣ್ಮುಖಪ್ಪ ಇದ್ದರು.