ಅಡುಗೆ ಕಾರ್ಮಿಕರ ಬದುಕು ಶೋಚನೀಯ : ಎಲ್.ಹೆಚ್. ಅರುಣ್‍ಕುಮಾರ್
ದಾವಣಗೆರೆ, ಜೂ. 13 – ಕರ್ನಾಟಕ ರಾಜ್ಯ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರು ಅಸಂಘಟಿತ ಕಾರ್ಮಿಕರ ಸಂಘದಿಂದ `ಅಡುಗೆ ಕಾರ್ಮಿಕರ ನ್ಯಾಯಯುತ ಬೇಡಿಕೆಗಳು’ ಕುರಿತು ವಿಚಾರ ಸಂಕಿರಣವನ್ನು ನಗರದ ರೋಟರಿ ಬಾಲಭವನದಲ್ಲಿ ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಸುಮಾರು 76 ವರ್ಷಗಳು ಕಳೆದರೂ ಅಡುಗೆ ವೃತ್ತಿಯಿಂದ ಜೀವನ ನಡೆಸುತ್ತಿ ರುವ ಅಡುಗೆ ಕಾರ್ಮಿಕರ ಬದುಕು ಶೋಚನೀಯ ವಾಗಿದೆ. ಇತರೆ ಅಸಂಘಟಿತ ವಲಯದ ಕಾರ್ಮಿಕ ರಂತೆ ಅಡುಗೆ ಕಾರ್ಮಿಕರನ್ನೂ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಅಡುಗೆ ಕೆಲಸ ಮಾಡುವವರು ಒಗ್ಗಟ್ಟಾಗಿ ಸಂಘಟನೆಯ ಮೂಲಕ ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಪ್ರತಿಪಾದಿಸಿದರು.
ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ, ಆ ಮಂಡಳಿಯಲ್ಲಿ ಸಂಘಟನೆಯ ಸದಸ್ಯರು ಪ್ರತಿನಿಧಿಗಳಾಗುವಂತೆ ನೋಡಿಕೊಳ್ಳಬೇಕು, ಅತ್ಯಂತ ಪವಿತ್ರ ವೃತ್ತಿಯಾದ ಅಸಂಖ್ಯಾತ ಜನರಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಹಸಿವನ್ನು ನೀಗಿಸುವ ಅಡುಗೆ ಕೆಲಸದವರು ಸಂಕಷ್ಟಗಳನ್ನು ಎದುರಿಸುತ್ತಿರುವುದು ವಿಷಾದನೀಯವೆಂದರು. ಇಂತಹ ಕಾರ್ಮಿಕರ ವಿದ್ಯಾಭ್ಯಾಸ, ಆಸ್ಪತ್ರೆಯ ಚಿಕಿತ್ಸಾ ವೆಚ್ಚ, ಅಪಘಾತ ಪರಿಹಾರ ಮತ್ತು ಪಿಂಚಣಿ ಸೌಲಭ್ಯಗಳು ಜಾರಿಗೆ ಬರುವಂತೆ ಸಂಘಟಿತರಾಗಿ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವಿಚಾರ ಮಂಡನೆ ಮಾಡಿದ ಕರ್ನಾಟಕ ಜನ ಶಕ್ತಿ ಪಕ್ಷದ ಸಂಸ್ಥಾಪಕ ರವಿಕುಮಾರ್ ಕೆ.ಎನ್. ಅವರು, ಕಡ್ಡಾಯವಾಗಿ ಅಡುಗೆ ಗುತ್ತಿಗೆದಾರರಿಗೆ ಕಂಟ್ರ್ಯಾಕ್ಟ್ ಪರವಾನಿಗೆ ಪಡೆಯಲು ಆದೇಶಿಸಬೇಕು, ಅಂತಹ ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸುವಂತೆ ಆದೇಶಿಸಬೇಕು. ಅದೇ ರೀತಿ ಹೋಟೆಲ್‍ಗಳ, ಬೇಕರಿಗಳ ಮತ್ತಿತರೆ ಮಾಲೀಕರುಗಳು ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ವಿತರಿಸಬೇಕು. ಆ ಮೂಲಕ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ, ಕಲ್ಯಾಣ ಮಂಡಳಿ ಮೂಲಕ ಕಾರ್ಮಿಕರನ್ನು ರಕ್ಷಣೆ ಮಾಡುವ ಕೆಲಸವಾಗಬೇಕೆಂದು ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಬಿ.ಜಿ. ಶಂಕರ್‍ರಾವ್ ನಾಡಿಗೇರ್ ಮಾತನಾಡಿ, ಸಂಘಟನೆಯಿಂದ ಮಾತ್ರ ನಾವು ಹಕ್ಕುಗಳನ್ನು ಪಡೆಯಲು ಸಾಧ್ಯ ಮತ್ತು ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಗಳ ಗಮನಹರಿಸಲು ಸಾಧ್ಯವಾಗುತ್ತದೆ. ಅಡುಗೆ ಕಾರ್ಮಿಕರ ಸಂಘಟನೆಯನ್ನು ನಿರಂತರವಾಗಿ ಉಳಿಸಿಕೊಳ್ಳುವ ಮೂಲಕ ಅಸಂಘಟಿತ ಕಾರ್ಮಿಕರ ಸಂಘಟನೆಯ ಮೂಲಕ ಸರ್ಕಾರಕ್ಕೆ ನಾವು ಹಕ್ಕೊತ್ತಾಯ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆಯನ್ನು ಬಲಗೊಳಿಸುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಸಂಘಟನಾ ಶಾಖೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ವಿಭಾಗದ ಕೆಎಲ್‍ಎಸ್ ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀಮತಿ ವೀಣಾ, ನ್ಯಾಯಕ್ಕಾಗಿ ಹಕ್ಕು ವೇದಿಕೆಯ ರಾಜ್ಯ ಸಂಚಾಲಕ ರಾಜನಹಳ್ಳಿ ಮಂಜುನಾಥ್, ಸಂಘದ ರಾಜ್ಯ ಗೌರವಾಧ್ಯಕ್ಷರಾದ ಹೆಚ್.ವಿ. ನಾಗರಾಜ್, ಸಂಘದ ಕಾನೂನು ಸಲಹೆಗಾರರಾದ ವಕೀಲ ಎಸ್. ವೆಂಕಟೇಶ್, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ರಾಘವೇಂದ್ರ, ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಉಡುಪ, ಸಂಘದ ಉಡುಪಿ ಶಂಕರ ಬ್ರಾಹ್ಮಣರ ಸಮಿತಿಯ ಜಿಲ್ಲಾಧ್ಯಕ್ಷ ಗುರು ಗಣೇಶ್ ಸೋಮಯಾಜಿ, ಸಂಘದ ಜಿಲ್ಲಾಧ್ಯಕ್ಷ ಎಂ. ಸುನಿಲ್ ಜೋಷಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ.ವಿ. ಶ್ರೀನಿವಾಸ್, ಸಂಘದ ಜಿಲ್ಲಾಧ್ಯಕ್ಷ ಪ್ರಭು ವಸ್ತ್ರದ್, ಸಂಘದ ಜಿಲ್ಲಾಧ್ಯಕ್ಷ ಎಂ. ಲೋಕೇಶ್‍ಗೌಡ್ರು, ರಾಜ್ಯ ಉಪಾಧ್ಯಕ್ಷ ಎಸ್. ಮುರುಗೇಶ್, ಸಂಘದ ತಾಲ್ಲೂಕು ಅಧ್ಯಕ್ಷ ವೀರೇಶ್ ಅವರುಗಳು ಮಾತನಾಡಿದರು.