ದಾವಣಗೆರೆ, ಜೂ. 13 – ಜಿಲ್ಲಾಡಳಿತ, ಜಿಲ್ಲಾ ಪಂಚಾಂಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿ ಅನ್ವಯ ಸ್ವಾಧಾರ ಗೃಹ ಹಾಗೂ ಉಜ್ವಲ ಕೇಂದ್ರಗಳನ್ನು ವಿಲೀನಗೊಳಿಸಿ ಶಕ್ತಿ ಸದನ ಕೇಂದ್ರಗಳನ್ನಾಗಿ ಸರ್ಕಾರದಿಂದ ಅನುಷ್ಠಾನಗೊಳಿ ಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ದಾವಣಗೆರೆಯಲ್ಲಿ 2 ಸ್ವಾಧಾರ ಗೃಹ ಹಾಗೂ 1 ರಾಜ್ಯ ಮಹಿಳಾ ನಿಲಯ ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಅನೈತಿಕ ಸಾಗಾಣಿಕೆಯಲ್ಲಿ ರಕ್ಷಿಸಲ್ಪಟ್ಟ ಮಹಿಳೆಯರಿಗೆ ಸೂಕ್ತ ಕಾನೂನು ನೆರವು, ವೈದ್ಯಕೀಯ ನೆರವು, ವೃತ್ತಿ ತರಬೇತಿ ನೀಡಿ ಅವರನ್ನು ಪುನರ್ವಸತಿಗೊಳಿಸಲು ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಮುಖಾಂತರ ಕ್ರಮವಹಿಸಬೇಕಾಗಿರುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ನೊಂದ ಮಹಿಳೆಯರೊಂದಿಗೆ ಮನೋಸಂವಾದ ನಡೆಸುವುದರ ಮುಖಾಂತರ ಸಾಂತ್ವನ ನೀಡಲು ಮನೋತಜ್ಞರನ್ನು ಹಾಗೂ ನುರಿತ ಸಮಾಲೋಚಕರೊಂದಿಗೆ ಸಂಪರ್ಕ ಇಟ್ಟುಕೊಂಡು ಮಹಿಳೆಯರ ಶ್ರೇಯಾಭಿವೃದ್ಧಿಗೆ ಕ್ರಮವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣ, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೋಟ್ರೆಶ್ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಮತ್ತು ಇತರರು ಹಾಜರಿದ್ದರು.