ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ಸವಿತಾ ಮಹೇಶ್
ದಾವಣಗೆರೆ, ಜೂ.12- ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳಿಂದಾಗಿ ಬಂಜೆತನ ನಿವಾರಣೆಗೆ ಅಗತ್ಯ ಚಿಕಿತ್ಸಾ ವಿಧಾನ ಇದ್ದು ಮಗು ಪಡೆಯಲು ಆತಂಕ ಪಡಬೇಕಾಗಿಲ್ಲ ಎಂದು ಸಂತಾನ ಫರ್ಟಿಲಿಟಿ ಸೆಂಟರ್‌ನ ಐವಿಎಫ್ ತಜ್ಞರಾದ ಡಾ.ಸವಿತಾ ಮಹೇಶ್ ತಿಳಿಸಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಜರುಗಿದ ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಬಂಜೆತನ ಕಾರಣಗಳು, ಚಿಕಿತ್ಸೆ ಮತ್ತು ನಿವಾರಣೆ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ದಂಪತಿಗಳು 12 ತಿಂಗಳು ಗರ್ಭ ನಿರೋಧಕ ರಹಿತ ಸಂಪರ್ಕ ಹೊಂದಿದ್ದು, ಮಕ್ಕಳಾಗದಿದ್ದಾಗ ಮತ್ತು ಮಹಿಳೆಗೆ ವಯಸ್ಸಾದಂತೆ ಅಂಡಾಣುವಿನ ಗುಣಮಟ್ಟ ಇಳಿಯುತ್ತದೆ. ಮಹಿಳೆಯು ಗರ್ಭವನ್ನು ಅಂತಿಮ ಘಟ್ಟದವರೆಗೆ ಒಯ್ಯಲು ವಿಫಲಳಾದಾಗ ಬಂಜೆತನ ಎನ್ನಲಾಗುತ್ತದೆ. ಬಂಜೆತನಕ್ಕೆ ಹೆಣ್ಣು ಮತ್ತು ಗಂಡು ಇಬ್ಬರೂ ಸಮ ಕಾರಣರಾಗಿರುತ್ತಾರೆ.
ಅಂಡೋತ್ಪತ್ತಿಯಲ್ಲಿ ತೊಂದರೆ, ಡಿಂಬನಾಳದ ಪ್ರತಿಬಂಧಕತೆ, ಪುರುಷ ಸಂಬಂಧಿ ಬಂಜೆತನ, ವಯಸ್ಸಿಗೆ ಸಂಬಂಧಿಸಿದ ಅಂಶಗಳು, ಗರ್ಭಕೋಶದ ತೊಂದರೆ, ಹಿಂದಿನ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಕೆಲವು ವಿವರಿಸಲಾಗದ ಅಂಶಗಳು ಬಂಜೆತನಕ್ಕೆ ಕಾರಣವಾಗುತ್ತವೆ.
ಆಸ್ಪತ್ರೆಯಲ್ಲಿ ಬಂಜೆತನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅನೇಕ ಸೌಲಭ್ಯಗಳಿವೆ. ಪುರುಷನ ನಿಸ್ಸತ್ವದ ರೇತಸ್ಸಿನಲ್ಲಿ ಸತ್ವಯುತವಾದ ಚಟುವಟಿಕೆಯಿಂದ ಕೂಡಿರುವ ವೀರ್ಯಾಣುವನ್ನು ಹುಡುಕಿ ಅದನ್ನು ಹೆಂಡತಿಯ ಗರ್ಭದಲ್ಲಿ ಹಾಕಲಾಗುತ್ತದೆ. ಈ ವಿಧಾನದಲ್ಲಿ ವೀರ್ಯಾಣು ಮೊಟ್ಟೆಯನ್ನು ಕೂಡುವ ಸಂಭವ ಹೆಚ್ಚು. ಈ ವಿಧಾನವನ್ನು ಮತ್ತೆ ಮತ್ತೆ ಪುನರಾವರ್ತಿಸಬಹುದು. ರೇತಸ್ಸಿನ ಗುಣಮಟ್ಟ ತೀರಾ ಕಳಪೆಯಾಗಿದ್ದಲ್ಲಿ ಐಸಿಎಸ್ಐ ಮಾಡುವುದು ಒಳ್ಳೆಯದು ಇದರಿಂದ ಶೇ 15ರಿಂದ 20ರವರೆಗೆ ಯಶಸ್ಸು ಸಾಧಿಸಬಹುದು ಎಂದು ಅವರು ವಿವರಿಸಿದರು.
ಒಂದು ವೇಳೆ ಗಂಡನು ವೀರ್ಯಾಣು ಹುಟ್ಟಿಸಲು ಅಸಮರ್ಥನಾದರೆ ಅಂತಹ ದಂಪತಿಗಳು ದಾನಿಗಳಿಂದಲೂ ಗರ್ಭಧಾರಣೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆರೋಗ್ಯವಂತ, ಬುದ್ದಿವಂತ ಸ್ವಯಂಪ್ರೇರಿತ ದಾನಿಗಳನ್ನು ಗುರುತಿಸಿ ಅವರ ವೀರ್ಯಾಣುವನ್ನು ತೆಗೆದು ಶೈತ್ಯಾಗಾರದಲ್ಲಿ ಸಂರಕ್ಷಿಸಿ ಇಡಲ್ಪಟ್ಟು, ದಂಪತಿಗಳು ಒಪ್ಪಿದರೆ ಅದನ್ನು ವರ್ಗಾಯಿಸಲಾಗುವುದು ಎಂದು ಡಾ. ಸವಿತಾ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ. ಮೃತ್ಯುಂಜಯ, ಡಾ.ಕೌಜಲಗಿ, ಡಾ.ಬಸಂತ್‌ಕುಮಾರ್, ಡಾ.ಸಚಿನ್ ಬಾತಿ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಮಂಜುನಾಥ್, ಅಂಜಲಿ ಮತ್ತಿತರರು ಉಪಸ್ಥಿತರಿದ್ದರು.