ಹೆಚ್ಚಿನ ಓದೇ ನನ್ನ ಧೈರ್ಯಕ್ಕೆ ಸಾಕ್ಷಿ

ಹೆಚ್ಚಿನ ಓದೇ ನನ್ನ ಧೈರ್ಯಕ್ಕೆ ಸಾಕ್ಷಿ

`ವನಿತಾ ಡಿಜಿಟಲ್‌ ಲೈಬ್ರರಿ’ ಉದ್ಘಾಟಿಸಿದ ಜಿ.ಬಿ. ವಿನಯ್ ಕುಮಾರ್

ದಾವಣಗೆರೆ, ಜೂ.11- ಬಾಲ್ಯದಲ್ಲಿ ಪುಸ್ತಕ ಗಳೇ ನನ್ನ ಆಟಿಕೆ ವಸ್ತುಗಳಾಗಿದ್ದವು. ಆದ್ದರಿಂದ ಹೆಚ್ಚಿನ ಓದು ನನಗೆ ಧೈರ್ಯ ನೀಡಿದೆ ಎಂದು ಇನ್‌ಸೈಟ್‌ ಐಎಎಸ್‌ ಸಂಸ್ಥಾಪಕ ಜಿ.ಬಿ. ವಿನಯ್‌ ಕುಮಾರ್‌ ವಿದ್ಯಾರ್ಥಿಗಳಿಗೆ ಹೇಳಿದರು.

ನಗರದ ಪಿ.ಜೆ. ಬಡಾವಣೆಯಲ್ಲಿನ ವನಿತಾ ಸಮಾಜದಲ್ಲಿ ಇನ್‌ಸೈಟ್‌ನ ಸಹಯೋಗದಲ್ಲಿ ಮಂಗಳವಾರ ಆ ಯೋಜಿಸಿದ್ದ `ವನಿತಾ ಡಿಜಿಟಲ್‌ ಲೈಬ್ರರಿ’  ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಹಳ್ಳಿಗಳಲ್ಲೂ ಇಂತಹ ಉತ್ತಮವಾದ ಬೆಳವಣಿಗೆ ಮೂಲಭೂತ ಸೌಕರ್ಯದಲ್ಲಿ ಸೇರಬೇಕಿದೆ. ಆದರೆ ಜಿಲ್ಲೆಯಲ್ಲಿನ ಯುವಕರಿಗೆ ಸ್ವತಂತ್ರವಾಗಿ ಚಿಂತಿಸಲು ಹಾಗೂ ಓದಲು ಗ್ರಂಥಾಲಯಗಳ ಕೊರತೆ ದೊಡ್ಡಮಟ್ಟದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಪುಸ್ತಕ ಹಾಗೂ ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಉತ್ತಮ ಜ್ಞಾನ ಸಂಪಾದನೆ ಮಾಡ ಬಹುದು ಎಂದು ಕಿವಿಮಾತು ಹೇಳಿದರು.

ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿ ಗಳು ದೊಡ್ಡ ಗುರಿಯೊಂದಿಗೆ ಮುನ್ನುಗ್ಗುವ ಜತೆಗೆ ಬಹುಮುಖ ಹಾಗೂ ವಿಶಾಲ ದೃಷ್ಟಿಕೋನದ ಚಿಂತನೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಡಿಜಿಟಲ್‌ ಗ್ರಂಥಾಲಯವು ದೊಡ್ದ ಕನಸು ಕಾಣುವವರಿಗೆ ಉತ್ತಮ ಅವಕಾಶ ನೀಡಲಿದೆ. ಅಂದು ವೆಬ್‌ಸೈಟ್‌ನಿಂದ ಪ್ರಾರಂಭವಾದ ಪಯಣ ದೊಡ್ಡ ಇನ್‌ಸೈಟ್‌ ಸಂಸ್ಥೆಯಾಗಿ ಬೆಳೆದಿದೆ ಎಂದ ಅವರು, ಬಡ ಹಾಗೂ ಓದುವ ಆಸಕ್ತಿ ಇರುವವರಿಗೆ ಸಂಸ್ಥೆೆ ಸಹಾಯ ಮಾಡಲಿದೆ ಎಂದು ಹೇಳಿದರು.

ಪಾಲಿಕೆಯ ಮಾಜಿ ಮಹಾಪೌರ ಎಸ್‌.ಟಿ. ವೀರೇಶ್‌ ಮಾತನಾಡಿ, ವನಿತಾ ಸಮಾಜದ 53ನೇ ಶಾಖೆಯಾದ ಡಿಜಿಟಲ್‌ ಗ್ರಂಥಾಲಯ ನಗರಕ್ಕೆ ವಜ್ರದ ಕಿರೀಟವಿದ್ದಂತೆ ಎಂದು ಹೇಳಿದರು.

ಕಾಣುವ ಕನಸು ನಿದ್ದೆಗೆಡಿಸುವಂತಿದ್ದರೆ ಅದೇ ನಿಜವಾದ ಕನಸು. ಈ ನಿಟ್ಟಿನಲ್ಲಿ ವಿನಯ್‌ ಅವರು ವಿದ್ಯಾರ್ಥಿ ಹಾಗೂ ಯುವ ಸಮೂಹಕ್ಕೆ ಮಾದರಿ ಆಗಿದ್ದಾರೆ ಎಂದರು.

ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಇಂದಿನಿಂದಲೇ ಸಾಧನೆ ಮಾಡಲು ಸಂಕಲ್ಪ ಮಾಡಿ ಎಂದ ಅವರು, ಮಹಿಳೆಯರೇ ಕಟ್ಟಿಬೆಳೆಸಿದ ಸಂಸ್ಥೆಗೆ ಸದಾ ಸಹಕಾರ ನೀಡಲು ಸದಾ ಸಿದ್ದ ಎಂದು ಹೇಳಿದರು.

ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್‌ ಮಾತನಾಡಿ, ಛಲ ಮತ್ತು ಆತ್ಮ ವಿಶ್ವಾಸದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿಶ್ಚಿತ ಗುರಿ ಹೊಂದುವಂತೆ ತಿಳಿಸಿದರು.

ವಿನಯ್‌ ಅವರಿಗೆ ಆನ್‌ಲೈನ್‌ ಕಂಟೆಂಟ್‌ ಮಾತ್ರ ಕೇಳಿದ್ದೇವು. ಆದರೆ ಅವರು ಡಿಜಿಟಲ್‌ ಪುಸ್ತಕದ ಜತೆಗೆ ಲೈವ್‌ಕ್ಲಾಸ್‌ ಸೌಲಭ್ಯವನ್ನೂ ಕಲ್ಪಿಸಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್‌, ವನಿತಾ ಡಿಜಿಟಲ್‌ ಲೈಬ್ರರಿ ಅಧ್ಯಕ್ಷೆ ರೇಖಾ ಪ್ರಸನ್ನ ಕುಮಾರ್‌, ಕಾರ್ಯದರ್ಶಿ ಆರ್‌. ವಾಗ್ದೇವಿ ಮತ್ತು ವಿದ್ಯಾರ್ಥಿಗಳಿದ್ದರು. ಸುಮಾ ಸ್ವಾಗತಿಸಿದರು. ಪಲ್ಲವಿ ಪ್ರಾರ್ಥಿಸಿದರು.

error: Content is protected !!