ದೇಶದ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ

ದೇಶದ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ

ಜಿಲ್ಲಾ ಕೃಷಿಕರೊಂದಿಗೆ ಸಂವಾದದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಶ್ಲ್ಯಾಘನೆ

ದಾವಣಗೆರೆ, ಜೂ. 11 – ಭಾರತೀಯ ಕೃಷಿ ಪದ್ಧತಿ ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಥಮ ಆದ್ಯತೆಯಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು. ಆಗ ಮಾತ್ರ ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರವಾಗುತ್ತದೆ  ಎಂದು ಅನೇಕ ನಿದರ್ಶನಗಳ ಮೂಲಕ  ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಕಿಸಾನ್ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸೇವಾ ಉಪಕ್ರಮ   ಜಿಲ್ಲಾ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರೈತರಿಗೆ ದೊರಕಬಹುದಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸೌಲಭ್ಯಗಳನ್ನು ಹಾಗೂ ಆಧುನಿಕ ಬೇಸಾಯ ಪದ್ಧತಿಗೆ ಬೇಕಾಗಬಹುದಾದ ಸವಲತ್ತುಗಳನ್ನು ಈ ಕಾರ್ಯಕ್ರಮ ತಿಳಿಸುವಂತಾಗಲಿ  ಎಂದು ಅವರು ಆಶಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯಿಂದ ಆಗಮಿಸಿದ್ದ ಕೃಷಿ ತಜ್ಞ ಡಾ. ಪಿ. ಎಸ್. ರಂಜಿತ್ ಕುಮಾರ್ ಅವರು ರೈತರಿಗೆ ಬೇಕಾಗುವ ಹಾಗೂ ಅನುಸರಿಸಬೇಕಾದ ಉಪಯುಕ್ತ ಹಾಗೂ ಲಾಭದಾಯಕ ಕ್ರಮಗಳ ಬಗ್ಗೆ  ಸ್ಲೈಡ್ಸ್ ಗಳ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಜಿ.ರುದ್ರಯ್ಯ  ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಜೀವನ ಮಟ್ಟ ಇತರೆ ಎಲ್ಲಾ ಉದ್ಯೋಗಗಳಿಗಿಂತಲೂ ಉತ್ತಮವಾದದ್ದು ಎಂಬ ಸ್ಥಿತಿಗೆ ಬರುವಂತದಾಗ ಮಾತ್ರ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ತಿಳಿಸಿದರು. 

ರೈತರ ಪರಿಸ್ಥಿತಿ ಸುಧಾರಿಸುವಲ್ಲಿ ಸರ್ಕಾರಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುವಂತಾಗಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಕೆನರಾ ಲೀಡ್ ಬ್ಯಾಂಕಿನ ಅಧಿಕಾರಿ ಶಿವಪ್ಪ ಅವರು ಉಪಸ್ಥಿತರಿದ್ದರು. ನಗರದ ಸೇವಾ ಕಾರ್ಯಕರ್ತ ರೂಪೇಶ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಪರಿಚಯದ ನುಡಿಗಳನ್ನು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವೇದಾನಂದ ಹೊನ್ನೇಬಾಗಿ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಸಂಚಾಲಕ ಅಶೋಕ್ ದುರ್ವಿಗೆರೆ ಮಾಡಿದರು.

error: Content is protected !!