ಮಾಜಿ ಸಚಿವ ಎಂಪಿಆರ್ ಕುಟುಂಬಕ್ಕೆ ಕೊಲೆ ಬೆದರಿಕೆ ಕರೆ

ಮಾಜಿ ಸಚಿವ  ಎಂಪಿಆರ್ ಕುಟುಂಬಕ್ಕೆ ಕೊಲೆ ಬೆದರಿಕೆ ಕರೆ

ಹೊನ್ನಾಳಿ, ಜೂ.2- ಇಂದು ಮಧ್ಯಾಹ್ನ ನನ್ನ ಹಾಗೂ ನನ್ನ ಕುಟುಂಬ ವನ್ನು ಕೊಲೆ ಮಾಡುವುದಾಗಿ ಫೋನ್ ಕರೆ ಮೂಲಕ ಬೆದರಿಕೆ ಹಾಕಿರುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಇಂದು ಸಂಜೆ ದೂರು ದಾಖಲಿಸಿದ್ದಾರೆ. 

ದೂರವಾಣಿಯಲ್ಲಿ `ನಿನ್ನನ್ನು ಮತ್ತು ನಿನ್ನ ಮಗನನ್ನು ಇಂದು ರಾತ್ರಿ ಎತ್ತಿ ಬಿಡುತ್ತೇವೆ’ ಎಂದರು. `ಯಾರು ನೀವು ಎನ್ನುತ್ತಿದ್ದಂತೆ’ ಫೋನ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ರೀತಿಯ ಬೆದರಿಕೆ ಕರೆಗಳು ಎರಡು ವರ್ಷಗಳ ಹಿಂದೆಯೂ ದುಬೈಯಿಂದ ಬಂದಿದ್ದು, ಬೆಂಗಳೂರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಂದು ಆಡಿಯೋದೊಂದಿಗೆ ದೂರು ದಾಖಲಿಸಿದ್ದನ್ನು ಹೊನ್ನಾಳಿ ಪೊಲೀಸ್ ಠಾಣೆ ಎದುರು ಮಾಧ್ಯಮದವರಿಗೆ ವಿವರಿಸಿದರು.

ನನ್ನ ಹಾಗೂ ನನ್ನ ಕುಟುಂಬವನ್ನು ಮುಗಿಸಿಬಿಡುತ್ತೇವೆ ಎನ್ನುವ ದೂರವಾಣಿ ಕರೆಗಳ ನಂಬರ್‌ಗಳನ್ನು ದೂರಿನಲ್ಲಿ ನಮೂದಿಸಿದ್ದೇನೆ. ಕೊಲೆ ಬೆದರಿಕೆಯ ಆರೋಪಿಗಳನ್ನು ಕಂಡುಹಿಡಿದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕಿದೆ ಎಂದರು. 

ಅನಾಮಧೇಯ ಕರೆಗಳನ್ನು, ಮಾಡಿ ಜೀವ ಬೆದರಿಕೆ ಹಾಕುತ್ತಿರುವ ಬಗ್ಗೆ  ಹೊನ್ನಾಳಿ ಪೋಲಿಸರು, ಡಿವೈಎಸ್ಪಿ ಹಾಗೂ ಎಸ್ಪಿ ಅವರು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿರುವರು.  

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಮುಖಂಡರಾದ ಮಾರುತಿ ನಾಯ್ಕ, ಕುಳಗಟ್ಟಿ ರಂಗಣ್ಣ ಇನ್ನಿತರರಿದ್ದರು.

error: Content is protected !!