ಸೋಲಿನ ಭೀತಿಯಿಂದ ವಿಶ್ವದ ದೊಡ್ಡ ಗುಟ್ಟು ಬಗೆಹರಿಸುವ ಪ್ರಯತ್ನಕ್ಕೆ ಯುವ ವಿಜ್ಞಾನಿಗಳ ನಿರಾಸಕ್ತಿ
ನವದೆಹಲಿ, ಜೂ. 3 – ಶತಮಾನದ ಹಿಂದೆ ಅಲ್ಬರ್ಟ್ ಐನ್ಸ್ಟೀನ್, ಮ್ಯಾಕ್ಸ್ ಪ್ಲಾಂಕ್ ಮತ್ತಿತರೆ ದಿಗ್ಗಜರ ಕಾರಣದಿಂದ ಭೌತಶಾಸ್ತ್ರ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾಗಿದ್ದವು. ಈ ಹಿಂದೆ ನಾವು ಜಗತ್ತು ಹೇಗಿದೆ ಎಂದು ಭಾವಿಸಿದ್ದೆವೋ, ಅದೆಲ್ಲವೂ ಹುಸಿಯಾಗಿ ಜಗತ್ತಿನ ಸ್ವರೂಪದ ಮೇಲೆ ಹೊಸ ಬೆಳಕು ಚೆಲ್ಲಿತ್ತು.
ವಿಶ್ವದ ಹಲವಾರು ಗುಟ್ಟುಗಳನ್ನು ಈ ಮೇಧಾವಿಗಳ ತಂಡ ಒಂದರ ಹಿಂದೊಂದರಂತೆ ಬಯಲಿಗೆ ಎಳೆದಿತ್ತು. ಪರಮಾಣುಗಳ ಬಗ್ಗೆ ಈ ವಿಜ್ಞಾನಿಗಳು ತೆರೆದಿಟ್ಟ ಸತ್ಯಗಳು ಕಾಲ್ಪನಿಕ ಜಗತ್ತನ್ನು ಮೀರಿಸುವ ರೀತಿ ಇದ್ದವು.
ಆದರೆ, ಈ ಕಾಲಘಟ್ಟದಲ್ಲೇ ಕ್ವಾಂಟಂ ಗಾತ್ರದ ಕಣಗಳಿಗೆ ಪ್ರತ್ಯೇಕ ಕ್ವಾಂಟಂ ಸಿದ್ಧಾಂತ ರೂಪುಗೊಂಡರೆ, ದೈತ್ಯ ಕಾಯಗಳಿಗೆ ಅನ್ವಯವಾಗುವ ಐನ್ಸ್ಟೀನ್ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಪ್ರತ್ಯೇಕವಾಗಿತ್ತು. ಇವೆರಡನ್ನೂ ಒಗ್ಗೂಡಿಸುವ ಎಲ್ಲದರ ಸಿದ್ಧಾಂತ ಒಂದಿದೆ ಎಂಬ ನಂಬಿಕೆ ಆ ಕಾಲದಿಂದಲೂ ಇದೆ.
ಆದರೆ, ಇದುವರೆಗೂ ಎಲ್ಲದರ ಸಿದ್ಧಾಂತವನ್ನು ಪರೀಕ್ಷಿಸಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ವಿಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ, ಸಾಕಷ್ಟು ವಿಜ್ಞಾನಿಗಳು ಎಲ್ಲದರ ಸಿದ್ಧಾಂತದ ಕಡೆ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಸೋಲಿನ ಭೀತಿಯೇ ಪ್ರಮುಖ ಕಾರಣ ಎಂದು ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ಯೂನಿವರ್ಸಿಟಿಯ ಸಂಶೋಧಕ ಸ್ಯಾಮ್ ಮೆಕೀ ಅಭಿಪ್ರಾಯ ಪಡುತ್ತಾರೆ.
ಎಲ್ಲದರ ಸಿದ್ಧಾಂತ ರೂಪಿಸುವುದು ಅಷ್ಟು ಸುಲಭವಲ್ಲ. ವಿಶ್ವದ ಮೂಲಭೂತ ಶಕ್ತಿಗಳನ್ನು ಒಗ್ಗೂಡಿಸುವ ಸೂತ್ರವನ್ನು ರೂಪಿಸಬೇಕಿದೆ. ಪರಮಾಣು ಕಣಗಳ ಹಂತದವರೆಗೆ ಪ್ರತಿಯೊಂದರ ಚಲನ ಹಾಗೂ ಸ್ಥಿರತೆಗಳನ್ನು ಲೆಕ್ಕ ಹಾಕಬೇಕಿದೆ. ಪರಮೋಚ್ಛವಾದ ಈ ಸವಾಲನ್ನು ಬಗೆ ಹರಿಸುವವರಿಗೆ ವಿಶ್ವದ ಅತ್ಯುನ್ನತ ಗೌರವ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಐನ್ಸ್ಟೀನ್ ಕಾಲಘಟ್ಟದ ವಿಜ್ಞಾನಿಗಳು ಎಲ್ಲದರ ಸಿದ್ಧಾಂತಕ್ಕೆ ಆದ್ಯತೆ ನೀಡಿದ್ದರು. ಸ್ವತಃ ಐನ್ಸ್ಟೀನ್ ಅವರು ಕೊನೆಯುಸಿರೆಳೆಯುವವರೆಗೂ ಈ ಸಿದ್ಧಾಂತದ ದಿಸೆಯಲ್ಲಿ ಶ್ರಮಿಸಿದ್ದರು. ಎಲ್ಲದರ ಸಿದ್ಧಾಂತದ ಕಡೆಗೆ ಅವರು ಪಟ್ಟ ಹರಸಾಹಸ ಕೆಲವೊಮ್ಮೆ ಲೇವಡಿಗೂ ಕಾರಣವಾಗಿತ್ತು.
ವಿಜ್ಞಾನ ವಲಯಕ್ಕೆ ಐನ್ಸ್ಟೀನ್ ನೀಡಿದ ಕೊಡುಗೆ ಕಾರಣದಿಂದ ಅವರನ್ನು ಮಹಾತಾರೆಯಂತೆ ಸ್ಮರಿಸಲಾಗುತ್ತಿದೆ. ಆದರೆ, ಭೌತಶಾಸ್ತ್ರಜ್ಞರಾದ ಆಥರ್ ಎಡ್ಡಿಂಗ್ಟನ್, ಹರ್ಮಾನ್ ವೈಲ್ ಹಾಗೂ ಗಣಿತಶಾಸ್ತ್ರಜ್ಞ ಡೇವಿಡ್ ಬಿಲ್ಬರ್ಟ್ ಅವರಿಗೆ ಅಂತಹ ಅದೃಷ್ಟ ಸಿಗಲಿಲ್ಲ.
ಎಡ್ಡಿಂಗ್ಟನ್ ಅವರು ಪ್ರಖ್ಯಾತಿ ಪಡೆಯಲು ಸಾಧ್ಯವಾಗದ ಮಹಾ ವಿಜ್ಞಾನಿ. 1919ರಲ್ಲಿ ಅವರು ಗ್ರಹಣದ ವಿಶ್ಲೇಷಣೆ ಮೂಲಕ ಐನ್ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತ ಸರಿ ಎಂಬುದನ್ನು ಸಾಬೀತು ಪಡಿಸಿದ್ದರು. ಆದರೆ, ಅವರು ಮೂಲಭೂತ ಸಿದ್ಧಾಂತವನ್ನು ಹುಡುಕುವ ಪ್ರಯತ್ನದಲ್ಲಿ ಕಳೆದು ಹೋದರು. ಕೊನೆಯ ದಶಕಗಳಲ್ಲಿ ಅವರು ಎಲ್ಲದರ ಸಿದ್ಧಾಂತದಲ್ಲಿ ಮುಳುಗಿ ವಿಫಲವಾಗಿದ್ದು, ಅವರ ಖ್ಯಾತಿಗೆ ಮಸಿ ಬಳಿದಿತ್ತು.
ನಂತರದಲ್ಲಿ ಭೌತಶಾಸ್ತ್ರಜ್ಞ ರಿಚರ್ಡ್ ಫೇನಮನ್ ಅವರು ಎಲ್ಲದರ ಸಿದ್ಧಾಂತದ ಕಡೆ ಗಮನ ಹರಿಸಿದರಾದರೂ, ನಂತರ ಆ ಪ್ರಯತ್ನ ಕೈಬಿಟ್ಟರು. ಬೇರೆ ವಿಷಯಗಳ ಸಂಶೋಧನೆಯಲ್ಲಿ ಅವರು ನೊಬೆಲ್ ಪ್ರಶಸ್ತಿಯನ್ನೂ ಪಡೆದರು.
ಭೌತಶಾಸ್ತ್ರ ವಲಯದಲ್ಲಿ ಉನ್ನತ ಸಾಧನೆಗೆ ಅವಕಾಶಗಳ ಬಾಗಿಲು ತೆರೆದಿರು ವಾಗ, ಸೋಲಿನ ಅಪಾಯ ಹೆಚ್ಚಾಗಿರುವ ಎಲ್ಲದರ ಸಿದ್ಧಾಂತ ಆಕರ್ಷಣೆ ಕಳೆದುಕೊಳ್ಳುತ್ತಾ ಬಂದಿತು. ಆಧುನಿಕ ಯುವ ಹಾಗೂ ಮೇಧಾವಿ ಮನಸ್ಸುಗಳಿಗೆ ವಿಶ್ವದ ಅತಿ ದೊಡ್ಡ ಪ್ರಶ್ನೆಯಾದ ಎಲ್ಲದರ ಸಿದ್ಧಾಂತದ ಬಗ್ಗೆ ಹೆಚ್ಚೇನೂ ಆಸಕ್ತಿ ಉಳಿದಿಲ್ಲ.
ಸ್ಟ್ರಿಂಗ್ ಸಿದ್ಧಾಂತವು ಎಲ್ಲದರ ಸಿದ್ಧಾಂತವಾಗಲಿದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ರೋಜರ್ ಪೆನ್ರೋಸ್ ಅವರು ಸ್ಟ್ರಿಂಗ್ ಸಿದ್ಧಾಂತವು ನಿಜವಾದ ವಿಜ್ಞಾನವೇ ಅಲ್ಲ ಎಂದು ಲೇವಡಿ ಮಾಡುತ್ತಾರೆ.
ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಸ್ಟ್ರಿಂಗ್ ಸಿದ್ಧಾಂತ ವಿಭಾಗವಾದ ಎಂ-ಥಿಯರಿಯು ಎಲ್ಲದರ ಸಿದ್ಧಾಂತವನ್ನು ವಿವರಿಸಲು ಅತ್ಯುತ್ತಮ ಎಂದು ಭಾವಿಸಿ ದ್ದರು. ಆದರೆ, ಈ ಸಿದ್ಧಾಂತ ಪ್ರಯೋಗಗಳಲ್ಲಿ ವಿಫಲವಾಗಿತ್ತು.
ಐನ್ಸ್ಟೀನ್, ಎಡ್ಡಿಂಗನ್ಟ್ ಹಾಗೂ ಹಾಕಿಂಗ್ ಅವರಿಂದಲೇ ಬಗೆಹರಿಸಲು ಸಾಧ್ಯವಾಗದ ಸಮಸ್ಯೆ ನಮ್ಮಿಂದಾದೀತೇ? ಎಂದು ಯುವ ವಿಜ್ಞಾನಿಗಳು ಅಚ್ಚರಿ ಪಟ್ಟರೂ ಆಶ್ಚರ್ಯವೇನಿಲ್ಲ. ಹೀಗಾಗಿ ಈಗಿನ ಪೀಳಿಗೆಯ ವಿಜ್ಞಾನಿಗಳು ಎಲ್ಲದರ ಸಿದ್ಧಾಂತದಂತಹ ಮೇರು ಪರ್ವತ ಏರುವ ಬದಲು, ಕ್ವಾಂಟಂ ಗುರುತ್ವಾಕರ್ಷಣದಂತಹ ಪರ್ಯಾಯಗಳ ಕಡೆ ಗಮನ ಹರಿಸುತ್ತಿದ್ದಾರೆ.
ಇಷ್ಟೆಲ್ಲ ಸವಾಲುಗಳಿದ್ದರೂ, ಹಲವು ಹಿರಿಯ ಭೌತಶಾಸ್ತ್ರಜ್ಞರು ಈ ಕಡೆ ಗಮನ ಹರಿಸುತ್ತಿದ್ದಾರೆ. ಫ್ರಾನ್ಸಿಸ್ ಕ್ರಿಕ್ ಅವರು ಹಲವು ವರ್ಷಗಳಿಂದ ಈ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರಾದರೂ, ಯಶಸ್ಸು ದೊರೆಯುತ್ತಿಲ್ಲ.
ಈಗಾಗಲೇ ಮಹಾನ್ ಸಾಧನೆ ಮಾಡಿರುವವರು, ಇನ್ನು ಕಳೆದುಕೊಳ್ಳುವು ದೇನೂ ಇಲ್ಲ ಎಂಬ ನಿರ್ಧಾರಕ್ಕೆ ಬಂದ ನಂತರ, ಎಲ್ಲದರ ಸಿದ್ಧಾಂತದ ಕಡೆ ಗಮನ ಹರಿಸಬಹುದಾಗಿದೆ.
ವಿಶ್ವದ ಪರಮೋಚ್ಛ ಸವಾಲಿಗೆ ವೈಫಲ್ಯದ ಹೆದರಿಕೆಯೇ ಪೆಡಂಭೂತ ವಾಗಿದೆ. ಶೈಕ್ಷಣಿಕ ಸ್ವರೂಪ ಹಾಗೂ ಸಂಶೋಧನಾ ಚೌಕಟ್ಟು ಈ ದಿಸೆಯಲ್ಲಿ ಪೂರಕವಾಗಿಲ್ಲ. ಪ್ರಯತ್ನಿಸಿ ವಿಫಲ ರಾದವರನ್ನು ಇತಿಹಾಸ ಕಡೆಗಣಿಸುತ್ತಿದೆ. ಇಷ್ಟಾದರೂ, ಅಪಾಯ ಎದುರಿಸಲು ಸಿದ್ಧವಾಗಿರುವವರಿಂದಲೇ ಪ್ರಗತಿ ಸಾಧ್ಯ ಎಂಬುದನ್ನು ಮರೆಯಲಾಗದು ಎಂದು ಸಂಶೋಧಕ ಸ್ಯಾಮ್ ಮೆಕೀ ಹೇಳುತ್ತಾರೆ.