ಅಧಿಕಾರಿಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ತರಾಟೆ
ದಾವಣಗೆರೆ, ಮೇ 30 – ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಿಂಡದಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಮೂರು ತಿಂಗಳು ಕಳೆದರೂ ಗ್ರಾಮಸ್ಥರಿಗೆ ಒಂದು ಹನಿ ನೀರು ವಿತರಿಸಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ದಿಂಡದಹಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಮೂರು ತಿಂಗಳು ಕಳೆದರೂ ಒಂದು ಹನಿ ನೀರು ವಿತರಿಸಿಲ್ಲ. ಶುದ್ಧ ನೀರು ಸಿಗದೇ ಗ್ರಾಮಸ್ಥರು ವಿವಿಧ ರೋಗಗಳಿಗೆ ತುತ್ತಾಗಬೇಕಾಗಿದೆ ಎಂದು ಗ್ರಾಮಸ್ಥರು ಶಾಸಕರ ಬಳಿ ಅಳಲು ತೋಡಿಕೊಂಡರು.
ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆದರೂ ಕೂಡ ಗ್ರಾಮಸ್ಥರಿಗೆ ನೀರು ವಿತರಿಸಲು ಆಗಿಲ್ಲ. ಇದೇ ರೀತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ಅನೇಕ ಘಟಕಗಳು ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಕೂಡಲೇ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ವಿತರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ವಿತರಿಸಬೇಕೆಂಬ ಉದ್ದೇಶದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಘಟಕಕ್ಕೆ ತಗಲುವ ಅನುದಾನವು ಬಿಡುಗಡೆಯಾಗಿದೆ. ಹೀಗಿದ್ದರೂ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು. ಜಿ.ಪಂ. ಸಿಇಒ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ: ಶಾಸಕ ಬಸವಂತಪ್ಪ ಮಾಯಕೊಂಡ ಗ್ರಾಮಕ್ಕೆ ತೆರಳಿ ಗ್ರಾಮದ ಕೆಪಿಎಸ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸಭೆ ನಡೆಸಿ ಶಾಲಾ-ಕಾಲೇಜು ಅಭಿವೃದ್ಧಿ ಬಗ್ಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿರುವುದಕ್ಕೆ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು.
ಮುಂದಿನ ಬಾರಿಯಾದರೂ ಶಾಲೆಗೆ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶ್ರಮಿಸಬೇಕು. ಬಳಿಕ ಶಾಲಾ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಪ್ರಾಂಶುಪಾಲ ಡಿ. ಬಸವರಾಜ್, ಉಪ ಪ್ರಾಂಶುಪಾಲರು, ಸಹ ಶಿಕ್ಷಕರು ಹಾಗೂ ಎಲ್ಲಾ ಶಾಲಾ ಸಿಬ್ಬಂದಿಗಳು, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಮುಖಂಡರಾದ ಮೆಡಿಕಲ್ ರುದ್ರೇಶಣ್ಣ, ಜಗದೀಶ್ ಇದ್ದರು.