ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ವಿಜಯ್ ಆತಂಕ
ಚಿತ್ರದುರ್ಗ, ಮೇ 30 – ವಿಶ್ವಾದ್ಯಂತ ಪ್ರತಿವರ್ಷ ತಂಬಾಕು ಉತ್ಪನ್ನಗಳ ನೇರ ಸೇವನೆಯಿಂದ 10 ಲಕ್ಷ ಜನರು ಮೃತರಾದರೆ, ಪರೋಕ್ಷ ಸೇವನೆಯಿಂದ ಸುಮಾರು 2 ಲಕ್ಷದಷ್ಟು ಜನರ ಜೀವ ಹಾನಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರಾದ ಎಂ. ವಿಜಯ್ ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ, ಯೂತ್ ರೆಡ್ಕ್ರಾಸ್ ಯುನಿಟ್, ಎಒಎಂಎಸ್ಐ, ಕೆಎಒಎಂಎಸ್ಐ, ಚಿತ್ರದುರ್ಗ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಚಿತ್ರದುರ್ಗ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು, ಬೀಡಿ-ಸಿಗರೇಟು, ಇ-ಸಿಗರೇಟ್ ಇನ್ನಿತರೆ ತಂಬಾಕು ಪದಾರ್ಥ ಗಳು ವಾತಾವರಣವನ್ನು ಕಲುಷಿತಗೊಳಿಸುವು ದಲ್ಲದೆ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಯುವಜನತೆ, ವಿದ್ಯಾರ್ಥಿಗಳು, ಅನಕ್ಷರಸ್ಥರು, ದುಡಿಯುವ ವರ್ಗದವರು ದುಶ್ಚಟಗಳ ಬಗ್ಗೆ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಹೆಚ್. ಪಂಚಾಕ್ಷರಿ ಮಾತನಾಡಿ, ತಂಬಾಕು ಮತ್ತು ತಂಬಾಕಿನ ಉಪಉತ್ಪನ್ನಗಳ ಬಳಕೆಯಿಂದ ವಿವಿಧ ರೀತಿಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಇವು ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರವಹಿಸಬೇಕೆಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯತ್ರಿ ಶಿವರಾಂ ರೆಡ್ಕ್ರಾಸ್, ಡಾ. ಆರ್. ಗೌರಮ್ಮ ಮಾತನಾಡಿದರು.
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಖಜಾಂಚಿ ಡಾ. ಪ್ರಣೀತ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಡಾ. ಸುನೀಲ್ ವಿ. ವಡವಡಗಿ, ಡಾ. ಗಝಲ ಯಾಸ್ಮಿನ್, ಡಾ. ಭೂಮಿಕ, ಎಸ್.ಜೆ.ಎಂ. ಕಾಲೇಜಿನ ಐಕ್ಯುಎಸಿ ಕೋ-ಆರ್ಡಿನೇಟರ್ ಡಾ. ಹರ್ಷವರ್ಧನ್, ರೆಡ್ಕ್ರಾಸ್ ಸೊಸೈಟಿಯ ನಿರ್ದೇಶಕ ಶಿವರಾಮ್ ವೇದಿಕೆಯಲ್ಲಿದ್ದರು. ಪ್ರೊ. ಡಿ. ನಾಗರಾಜಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಾಧ್ಯಾಪಕರುಗಳಾದ ಪ್ರೊ. ಎಲ್.ಶ್ರೀನಿವಾಸ್, ಪ್ರೊ. ಹೆಚ್.ಎಂ. ಮಂಜುನಾಥಸ್ವಾಮಿ, ಡಾ. ಬಿ. ರೇವಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಡಾ. ಸತೀಶ್ ನಾಯ್ಕ್ ಸ್ವಾಗತಿಸಿದರು. ಪ್ರೊ. ಟಿ.ಎನ್. ರಜಪೂತ್ ವಂದಿಸಿದರು. ಡಾ. ಎಸ್. ನಾಜೀರುನ್ನೀಸಾ ನಿರೂಪಿಸಿದರು.