ಜಿಲ್ಲೆಯಲ್ಲಿ ಬಿತ್ತನೆ ಬೀಜ ದಾಸ್ತಾನು

ದಾವಣಗೆರೆ, ಮೇ 29- ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಜನವರಿಯಿಂದ ಮೇ 28 ನೇ ದಿನಾಂಕದವರೆಗೆ ಜಿಲ್ಲೆಯ ವಾಡಿಕೆ ಮಳೆ 96.6 ಮಿ.ಮೀ ಇದೆ. 145 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.50 ರಷ್ಟು ಮಳೆಯಾಗಿದೆ. ಭೂಮಿ ಸಿದ್ಧತೆಗೆ ಅನುಕೂಲವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಮುಖ್ಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಅತ್ಯಮೂಲ್ಯವಾಗಿವೆ ಎಂದು ಹೇಳಿದ್ದಾರೆ.

ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತ, ತೊಗರಿ, ರಾಗಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಒಟ್ಟು 49869 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಇದುವರೆಗೆ 54052 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನನ್ನು ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ನಿಗದಿಪಡಿಸಿದ ಸಹಕಾರ ಸಂಘಗಳ ಮೂಲಕ ರಿಯಾಯತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ದೃಢೀಕೃತ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರಿಗೆ ಯಾವುದೇ ಬಿತ್ತನೆ ಬೀಜಗಳ ಕೊರತೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರೈತರು ಲೂಸ್ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೇ ಬೀಜದಂತೆ ಬೆಳೆ ನೂಲಿನಂತೆ ಸೀರೆ ಎಂಬ ಗಾದೆಯಂತೆ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ, ಅಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಖರೀದಿಸಿ ಬಿತ್ತನೆ ಮಾಡಲು ರೈತರಲ್ಲಿ ಕೋರಿದ್ದಾರೆ.

ಜಿಲ್ಲೆಗೆ ಮುಂಗಾರು ಹಂಗಾಮಿಗೆ ಒಟ್ಟು 153683 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆಯಿದ್ದು, ಜೂನ್ ಮಾಹೆಗೆ 28178 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ಅವಶ್ಯಕತೆ ಇರುತ್ತದೆ.

ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಲೂಸ್ ಬಿತ್ತನೆ ಬೀಜ ದಾಸ್ತಾನು ಹಾಗೂ ಕಳಪೆ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಸಹಾಯಕ ಕೃಷಿ ನಿರ್ದೇಶಕರು 8277931106, 8277931207 ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ. 

error: Content is protected !!