ಬಸವೇಶ್ವರರ ತತ್ವ ಮೈಗೂಡಿಸಿಕೊಂಡಾಗ ಬದುಕು ಸಾರ್ಥಕ

ಬಸವೇಶ್ವರರ ತತ್ವ ಮೈಗೂಡಿಸಿಕೊಂಡಾಗ ಬದುಕು ಸಾರ್ಥಕ

ವಚನ ಸಾಹಿತ್ಯ ಪರಿಷತ್ತು,ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶ್ರೀ

ದಾವಣಗೆರೆ, ಮೇ 29- ಜಗಜ್ಯೋತಿ ಬಸವೇಶ್ವರರ ತತ್ವಗಳನ್ನು ಸ್ವಲ್ಪವಾದರೂ ಮೈಗೂಡಿಸಿಕೊಂಡು ಸಾಧನೆ ಮಾಡಿದಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಬರುತ್ತದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ವಚನ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸ್ಫೂರ್ತಿ ಪ್ರಕಾಶನ ತೆಲಗಿ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಜಗಜ್ಯೋತಿ ಬಸವೇ ಶ್ವರರ ಜಯಂತ್ಯೋತ್ಸವ ಹಾಗೂ ಹಾಲಪ್ಪ ವೀರಪ್ಪ ಗುಂಡಗಟ್ಟಿ, ಮಹಾದೇವಮ್ಮ ಹಾಲಪ್ಪ ಗುಂಡ ಗಟ್ಟಿ ಅವರ ಸ್ಮರಣಾರ್ಥ ಕೊಡಮಾಡುವ ವಿಶ್ವಗುರು ಬಸವಶ್ರೀ ಹಾಗೂ ರಕ್ಷಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬದುಕಿಗೆ ಅರ್ಥ ಮತ್ತು ವ್ಯವಸ್ಥೆ ಇದ್ದರೆ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗಲಿದೆ. ಆದ್ದರಿಂದ ತತ್ವಬದ್ಧವಾದ ಆದರ್ಶದೊಂದಿಗೆ ಇಟ್ಟ ಗುರಿ ತಲುಪಿ ಸಾಧನೆ ಮಾಡಬೇಕು. ಸಾಧಕರ ಬದುಕಿನ ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು ಎಂದರು.

ಸಾಧು, ಸಂತರ ಗುಣಗಳನ್ನು ಉತ್ಕರ್ಷಣೆ ಮಾಡಿ ಪ್ರಚಾರ ಮಾಡುವುದರಿಂದ ಸಜ್ಜನರಾಗಲು ಸಾಧ್ಯ. ಒಳ್ಳೆಯ ಆಚಾರ-ವಿಚಾರಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡರೆ ದೈಹಿಕ ಆರೋಗ್ಯ ಚೆನ್ನಾ ಗಿರಲಿದೆ. ಮಾನಸಿಕ ಸ್ವಾಸ್ಥ್ಯ ಚೆನ್ನಾಗಿರಬೇಕಾದರೆ ಸಾಹಿತ್ಯ ಮತ್ತು ಸಂಗೀತದ ಮೊರೆ ಹೋಗಬೇಕು. ಅಧ್ಯಾತ್ಮ ಎಂದರೆ ತಪಸ್ಸು ಮತ್ತು ಪೂಜೆ ಮಾಡು ವುದಲ್ಲ. ಸೇವೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು ನೈಜವಾದ ಅಧ್ಯಾತ್ಮ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಶ್ರೀಮತಿ ಜಯಮ್ಮ ನೀಲಗುಂದ ಅವರು, ತಂದೆ-ತಾಯಿ, ಭೂಮಿ ಮತ್ತು ದೇಶದ ಋಣ ತೀರಿಸಲು ಸಾಧ್ಯವಿಲ್ಲ. ಆದರೆ, ರಾಜಶೇಖರ ಗುಂಡಗಟ್ಟಿ ಅವರು ತಮ್ಮ ತಂದೆ ಹಾಲಪ್ಪ ವೀರಪ್ಪ ಗುಂಡಗಟ್ಟಿ ಹಾಗೂ ತಾಯಿ ಮಹಾದೇವಮ್ಮ ಹಾಲಮ್ಮ ಗುಂಡಗಟ್ಟಿ ಸ್ಮರಣಾರ್ಥ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡ ವಿಶ್ವಗುರು ಬಸವಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲು ಸಂಕಲ್ಪ ಮಾಡಿರುವುದು ಶ್ಲ್ಯಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕನ್ನಡ ಪಂಡಿತ ಎಸ್.ಎಂ. ರುದ್ರಮುನಿ ಅಯ್ಯನವರಿಗೆ ವಿಶ್ವಗುರು ಬಸವಶ್ರೀ ಪ್ರಶಸ್ತಿ ಹಾಗೂ ಮಾಜಿ ಯೋಧ ಎಂ.ಎಸ್. ರಾಮ ಚಂದ್ರಪ್ಪನವರಿಗೆ ರಕ್ಷಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. `ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯ’ ಕುರಿತು ಶರಣ ಸಾಹಿತ್ಯ ಪರಿಷತ್ತಿನ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ಪೂಜಾರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಹೆಚ್. ರಾಜಶೇಖರ್‌ ಗುಂಡಗಟ್ಟಿ, ಹೊನ್ನಾಳಿ ಹಿರಿಯ ಸಾಹಿತಿ ಯು.ಎನ್. ಸಂಗನಾಳಮಠ್, ಸ್ಫೂರ್ತಿ ಪ್ರಕಾಶನ ತೆಲಗಿ ಅಧ್ಯಕ್ಷ ಎಂ. ಬಸವರಾಜ್, ಉಮಾದೇವಿ ಎಸ್. ಹಿರೇಮಠ, ಓಂಕಾರಯ್ಯ ಎಸ್. ತವನಿಧಿ, ಸುನೀತಾ ಪ್ರಕಾಶ್, ವೀರಭದ್ರಪ್ಪ ತೆಲಗಿ, ಜಿ.ಎಂ.ಜಿ. ವೀರೇಶ್ ಮತ್ತಿತರರಿದ್ದರು.

error: Content is protected !!