ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಪರಿಸರ ಕಾಪಾಡಿ

ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಪರಿಸರ ಕಾಪಾಡಿ

ದೃಶ್ಯಕಲಾ ವಿವಿ ಸಭಾಂಗಣದಲ್ಲಿ ದಾವಣಗೆರೆ ವಿವಿಯ ವಿಜ್ಞಾನ ವಿಭಾಗದ ಡಾ. ವೀರೇಶ್‌


ಸಮೀಪದ ಆವರಗೊಳ್ಳ ಘನತ್ಯಾಜ್ಯ ಘಟಕದಲ್ಲಿ ಬೆಂಕಿ ತಗುಲಿ 15 ದಿನಗಳ ಕಾಲ ಹೊತ್ತಿ ಉರಿದಿತ್ತು. ಅಂತಹ ಘಟನೆ ಆದಾಗ ಹೊಗೆಯಿಂದ ಬರುವ ವಿಷ ಅನಿಲ ಹಾಗೂ ಮಳೆಗಾಲದಲ್ಲಿ ಅಲ್ಲಿಂದ ಬಸಿದು ಬರುವ ನೀರಿನಿಂದ ಜನರಿಗೆ ಕ್ಯಾನ್ಸರ್‌ ಬರಲಿದೆ ಮತ್ತು ಕಸ ವಿಲೇವಾರಿ ಘಟಕದ ವ್ಯಾಪ್ತಿಯಲ್ಲಿನ ಜನರ ಆರೋಗ್ಯ ಕ್ರಮೇಣ ಹದಗೆಡುತ್ತದೆ.

– ಡಾ.ಎಸ್‌.ಜೆ. ವೀರೇಶ್‌


ದಾವಣಗೆರೆ, ಮೇ 29- ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಪರಿಸರ ಸಂರಕ್ಷಣೆ  ಮಾಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ದಾವಣಗೆರೆ ವಿವಿಯ ವಿಜ್ಞಾನ ವಿಭಾಗದ ಡಾ.ಎಸ್‌.ಜೆ. ವೀರೇಶ್‌ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಘನತ್ಯಾಜ್ಯ ನಿರ್ವಹಣೆ’ ಎಂಬ ವಿಷಯ ಕುರಿತು ಮಾತನಾಡಿದರು.

ದೇಶದಲ್ಲಿ ವರ್ಷಕ್ಕೆ 62 ಮಿಲಿಯನ್‌ ಟನ್‌ ಪ್ರಮಾಣದ ಘನತ್ಯಾಜ್ಯ ಉತ್ಪತ್ಪಿಯಾಗುತ್ತಿದೆ. ಇದರಲ್ಲಿ ಶೇ.70ರಷ್ಟು ಸಂಗ್ರಹಣೆ ಮಾಡುತ್ತಿದ್ದರೆ, ಶೇ.30ರಷ್ಟು ಮಣ್ಣಿನಲ್ಲಿ ಬೆರೆತು ಪರಿಸರ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಹಸಿಕಸ, ಒಣಕಸ ಹಾಗೂ ವಿಷಕಾರಿ ಕಸವಾಗಿ ವಿಂಗಡಣೆ ಮಾಡಲಾಗುತ್ತಿದೆ. ಆದ್ದರಿಂದ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು ಎಂದು ತಿಳಿಸಿದರು. 

ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ, ಕಸದ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 2030ರ ವೇಳೆಗೆ  ವರ್ಷಕ್ಕೆ 156 ಮಿಲಿಯನ್‌ ಟನ್‌ನಷ್ಟು ಘನತ್ಯಾಜ್ಯ ಉತ್ಪಾದನೆ ಆಗಬಹುದು ಎಂದು ಹೇಳಿದರು.

ಕಾನೂನಿನ ಪ್ರಕಾರ ಕಸವನ್ನು ಸುಡುವಂತಿಲ್ಲ ಆದ್ದರಿಂದ ಹಸಿಕಸವನ್ನು ಕೊಳೆಸಿ ಗೊಬ್ಬರ ಮಾಡಲಾಗುತ್ತದೆ ಮತ್ತು ಕೊಳೆಯಲಾರದ ವಸ್ತುವನ್ನು ಮರುಬಳಕೆಗೆ ಉಪಯೋಗಿಸುತ್ತಾರೆ ಎಂದು ಮಾಹಿತಿ ನೀಡಿದರು.

ಪರಿಸರ ಸ್ವಾಸ್ಥ್ಯದ ದೃಷ್ಟಿಯಿಂದ ಪರಿಸರಕ್ಕೆ ಹಾನಿಯಾಗುವ ವಸ್ತುವಿನ ಬಳಕೆ ನಿಲ್ಲಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಯು. ಕುಮಾರ್‌ ಸಿದ್ದಮಲ್ಲಪ್ಪ ಮಾತನಾಡಿ, ನಮ್ಮ ಜ್ಞಾನವನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು ಎಂದು ದೃಶ್ಯಕಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ವೇಳೆ ಶಿಬಿರಾಧಿಕಾರಿ ಡಾ. ಸತೀಶ್‌ ಕುಮಾರ್‌ ಪಿ. ವಲ್ಲೇಪುರೆ, ಸಹ ಶಿಬಿರಾರ್ಥಿ ಡಾ.ಎಂ.ಕೆ. ಗಿರೀಶ್‌ ಕುಮಾರ್‌, ಬೋಧನಾ ಸಹಾಯಕರಾದ ದತ್ತಾತ್ರೇಯ ಎನ್‌. ಭಟ್‌, ಸಂತೋಷ್ ಕುಮಾರ್‌ ಕುಲಕರ್ಣಿ, ಕಾಲೇಜಿನ ಸಿಬ್ಬಂದಿ ಮತ್ತು  ವಿದ್ಯಾರ್ಥಿಗಳಿದ್ದರು.

ನವ್ಯಾ ನಿರೂಪಿಸಿದರು ಮತ್ತು ಸ್ನೇಹಾ ಸ್ವಾಗತಿಸಿದರು.

error: Content is protected !!