ಹರಿಹರ : ನಾಳೆ ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ, ಇಂದು ಸ್ವಚ್ಛತೆ

ಹರಿಹರ, ಮೇ 29- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 30 ರಂದು ಶಾಲೆಗಳ ಸ್ವಚ್ಛತಾ ಕಾರ್ಯ ಹಾಗೂ ನಾಡಿದ್ದು ದಿನಾಂಕ 31 ರಂದು ತಳಿರು, ತೋರಣಗಳಿಂದ ಸಿಂಗರಿಸಿ, ಹೂಗಳನ್ನು ನೀಡಿ, ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಸರ್ಕಾರಿ ಪ್ರೌಢಶಾಲೆಗಳು, ಅನುದಾನಿತ ಪ್ರಾಥಮಿಕ ಶಾಲೆಗಳು, ಅನುದಾನಿತ ಪ್ರೌಢಶಾಲೆಗಳು, ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆಗಳು, ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳು, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಇಂದಿನಿಂದ ಶಾಲಾ ಆವರಣ ಸ್ವಚ್ಛತೆ, ಕೊಠಡಿಗಳ ಸ್ವಚ್ಛತೆ ಹಾಗೂ ಅಕ್ಷರ ದಾಸೋಹದ ಕೊಠಡಿಗಳ ಸ್ವಚ್ಛತೆ ಮಾಡಿಕೊಳ್ಳಲು ಮುಖ್ಯ ಶಿಕ್ಷಕರ ಸಭೆ ಕರೆದು ಸೂಚಿಸಲಾಗಿದೆ ಎಂದು ಬಿಇಓ ತಿಳಿಸಿದ್ದಾರೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಎಲ್ಲಾ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಶೇಷ ದಾಖಲಾತಿ ಆಂದೋಲನ, ಜಾಥಾ, ಪ್ರಭಾತ್ ಪೇರಿ, ಮನೆ ಮನೆ ಭೇಟಿ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮಾಡುವ ಮೂಲಕ ಅರ್ಹ ವಯಸ್ಸಿನ ಎಲ್ಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಮಕ್ಕಳಿಗೆ ಶಾಲಾ ಪ್ರಾರಂಭದ ದಿನದಂದೇ ಎಸ್‌ಡಿಎಂಸಿ ಮತ್ತು ಪೋಷಕರ ಸಮ್ಮುಖದಲ್ಲಿ ವಿತರಣೆ ಮಾಡಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳಾದ ಸೇತು ಬಂಧ ಶಿಕ್ಷಣ ಮತ್ತು ವಿದ್ಯಾಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

error: Content is protected !!