ಪಾಠ ಮಾಡಿದ ಗುರುವೃಂದಕ್ಕೆ ರೊಟ್ಟಿ ಊಟ ಉಣಿಸಿದ ವಿದ್ಯಾರ್ಥಿನಿಯರು
ದಾವಣಗೆರೆ, ಮೇ 29- ಇಂದಿನ ಮಕ್ಕಳಿಗೆ ಅವರ ಶಿಕ್ಷಕರ ಮೇಲೆ ಗೌರವ ಭಾವನೆಯೇ ಇಲ್ಲ. ಇಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಆತ್ಮೀಯವಾದ ಸಂಬಂಧವಿಲ್ಲ ಎಂದೆಲ್ಲಾ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿ ಒಂದು ಶಾಲೆಯ ಏಳನೇ ತರಗತಿಯ ಪುಟ್ಟ ವಿದ್ಯಾರ್ಥಿನಿಯರು ತಾವು ಶಾಲೆಯಿಂದ ಬೀಳ್ಕೊಡುವ ಸಮಯದಲ್ಲಿ ಏಳು ವರ್ಷಗಳ ಕಾಲ ಅವರಿಗೆ ಪಾಠ ಮಾಡಿದ ಗುರು ವೃಂದದವರಿಗೆ ರುಚಿಯಾದ ರೊಟ್ಟಿ ಊಟ ಬಡಿಸಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂತಹ ಅಭಿನಂದನಾರ್ಹವಾದ ಕೆಲಸವನ್ನು ಮಾಡಿದವರು, ದಾವಣಗೆರೆಯ ಎಸ್.ಕೆ.ಪಿ ರಸ್ತೆಯಲ್ಲಿ ರುವ ಚನ್ನಗಿರಿ ವಿರೂಪಾಕ್ಷಪ್ಪ ವನಜಾಕ್ಷಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯರು. ಇದು ಒಂದು ಅನುದಾನಿತ ಶಾಲೆ. ಈ ಶಾಲೆಯ 14 ವಿದ್ಯಾರ್ಥಿನಿಯರು ಮಾರ್ಚ್ 6 ರಂದು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿ ಊಟವನ್ನು ವ್ಯವಸ್ಥಿತವಾಗಿ ಬಡಿಸಿ, ಉಣಿಸಿ ಆ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ರೈಸ್ಬಾತ್, ಜಾಮೂನ್, ಬಿಸಿ ರೊಟ್ಟಿ, ಚಪಾತಿ, ಹಪ್ಪಳ, ಹೀರೇಕಾಯಿ ಪಲ್ಯ, ಪಾಯಸ, ಹೆಸರುಕಾಳು ಪಲ್ಯ, ಕಡ್ಲೆಕಾಳು ಉಸುಳಿ, ಕೆಂಪು ಚಟ್ನಿ, ಕೋಸಂಬರಿ, ಚಟ್ನಿಪುಡಿ, ಮೊಸರು, ಟೊಮ್ಯಾಟೋ ಚಟ್ನಿ ಹೀಗೆ ಬಗೆಬಗೆಯ ಪದಾರ್ಥಗಳು ಈ ಕೃತಜ್ಞತೆಯ ಭೋಜನದಲ್ಲಿದ್ದವು. ವಿದ್ಯಾರ್ಥಿನಿಯರಾದ ಮೇಘನಾ ಕೆ., ಸಿಂಧು ಎಸ್, ಸಿಂಚನ ಎಮ್, ಶ್ರವಂತಿ ಎಸ್.ಎಮ್, ಭೂಮಿಕ ಎಂ, ಚಂದನ ಡಿ, ಬಿಂದು ಆರ್, ಅಮೃತಾ ಪಿ, ರೇಣುಕಾ ಎಂ, ನಿಖಿತ ಟಿ.ಎನ್, ತನುಶ್ರೀ ಜಿ.ಎಸ್ ಇವರುಗಳು ತಾವೇ ಒಂದು ಅಥವಾ ಎರಡು ಪದಾರ್ಥಗಳನ್ನು ತಮ್ಮ ಮನೆಯಿಂದ ತಂದು ಪ್ರೀತಿ-ಗೌರವಗಳಿಂದ ಬಡಿಸಿ ಗುರು ವೃಂದದವರಿಗೆ ಸಲ್ಲಿಸಿದರು.
ಈ ಭೋಜನ ಕೃತಜ್ಞತೆಯ ನೇತೃತ್ವ ವಹಿಸಿಕೊಂ ಡಿದ್ದು ಏಳನೇ ತರಗತಿಯ ವಿದ್ಯಾರ್ಥಿನಿಯಾದ ಮೇಘನಾ ಕೆ. ಇದರ ಬಗ್ಗೆ ಕೇಳಿದಾಗ ಈ ವಿದ್ಯಾರ್ಥಿನಿಯು ನಮ್ಮ ಟೀಚರ್ಸ್ಗಳು ನಮಗೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ತುಂಬಾ ಪ್ರೀತಿಯಿಂದ ಪಾಠ ಮಾಡಿದ್ದಾರೆ. ನಮ್ಮನ್ನು ಬೆಳೆಸಿದ್ದಾರೆ. ಅವರಿಗೆ ಏನು ಕೊಟ್ಟರೂ ಕಡಿಮೆಯೇ. ಅಂತಹ ನಮ್ಮ ಗುರುಗಳಿಗೆ ಕೊನೆಯ ಪಕ್ಷ ಒಂದು ಹೊತ್ತಿನ ಊಟವನ್ನಾದರೂ ಕೊಡುವ ಮೂಲಕ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕು ಎಂದು ಈ ರೀತಿ ಮಾಡಿದ್ದೇವೆ. ಊಟ ಹೇಗಿತ್ತೋ, ಆದರೆ ನಮ್ಮ ಎಲ್ಲಾ ಟೀಚರ್ಸ್ಗಳು ಅದನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್ ಎಂದು ಹೇಳಿದಳು.
ಏಳನೇ ತರಗತಿಯ ತರಗತಿ ಶಿಕ್ಷಕಿ ಟಿ.ಕೆ.ನಳಿನ ಮಾತನಾಡಿ, ನಮ್ಮ ಮಕ್ಕಳು ನಮಗೆ ಊಟ ತಂದಾಗ ಯಾವ ಶಿಕ್ಷಕರಿಗೆ ತಾನೇ ಖುಷಿಯಾಗುವುದಿಲ್ಲ. ಮಕ್ಕಳ ಈ ಜವಾಬ್ದಾರಿ ಮತ್ತು ಭಾವನೆಯನ್ನು ನೋಡಿ ಎಲ್ಲಾ ಶಿಕ್ಷಕರಿಗೆ ತುಂಬಾ ಸಂತೋಷವಾಗಿದೆ, ಹೃದಯತುಂಬಿ ಬಂದಿತ್ತು. ದೊಡ್ಡ ದೊಡ್ಡ ಶಾಲೆಗಳಲ್ಲಿ ಕಲಿಯುವ ಶ್ರೀಮಂತರ ಮಕ್ಕಳಿಗೆ ಬರದ ಆಲೋಚನೆ ನಮ್ಮಂತಹ ಒಂದು ಅನುದಾನಿತ ಶಾಲೆಯ ಮಕ್ಕಳಿಗೆ ಬಂದಿರುವುದಕ್ಕೆ ನಮಗೆ ಸಂತೋಷ ಮತ್ತು ಹೆಮ್ಮೆ ಎರಡೂ ಇದೆ.
ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ಮಾತು ಚೆಂದ ಅನ್ನೋದು ಇವತ್ತು ನಮಗೆಲ್ಲಾ ಚೆನ್ನಾಗಿ ಅರ್ಥವಾಯ್ತು ಎಂದು ಭಾವುಕರಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಲ್.ಶ್ರೀನಿವಾಸ ಶ್ರೇಷ್ಠಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಇಂತಹದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಶಾಲೆಯಲ್ಲಿ ಕೂಲಿಕಾರರ ಮಕ್ಕಳೇ ಜಾಸ್ತಿ. ಅವರ ಮನೆಯಲ್ಲಿಯೇ ಸಾಕಷ್ಟು ಸಮಸ್ಯೆಗಳಿರುತ್ತವೆ. ಹಾಗಿದ್ದರೂ ಇದನ್ನೆಲ್ಲಾ ವ್ಯವಸ್ಥೆ ಮಾಡಿದ ಮಕ್ಕಳು ಮತ್ತು ಅವರ ಪೋಷಕರು ಎಲ್ಲರಿಗೂ ಮಾದರಿ ಎಂದು ಹೇಳಿದರು. ಊಟ ಹೇಗಿತ್ತು ಎಂದು ಕೇಳಿದಾಗ ಮಕ್ಕಳು ಕೊಟ್ಟ ಊಟಕ್ಕೆ ಬೆಲೆ ಕಟ್ಟಲಿಕ್ಕೆ ಆಗುತ್ತಾ? ನಾವು ಪ್ರತಿದಿನ ಊಟ ಮಾಡ್ತೇವೆ, ಆದ್ರೆ ಈ ಊಟದ ಮುಂದೆ ಯಾವುದೂ ಇಲ್ಲ, ಇದು ನಮ್ಮ ಮಕ್ಳು ಕೊಟ್ಟ ಊಟ ಎಂದು ಹೃದಯ ತುಂಬಿ ಹೇಳಿದರು.