ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸದೃಢ ದೇಶ ಕಟ್ಟಲು ಸಾಧ್ಯ

ದಾವಣಗೆರೆ ವಿವಿಯ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಡಾ. ಶಿವವೀರ ಕುಮಾರ್‌ ಚಂಡ್ರಕಿಮಠ

ದಾವಣಗೆರೆ, ಮೇ 28- ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸದೃಢ ದೇಶ ಕಟ್ಟಲು ಸಾಧ್ಯ ಎಂದು ದಾವಣಗೆರೆ ವಿವಿಯ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಡಾ. ಶಿವವೀರ ಕುಮಾರ್‌ ಚಂಡ್ರಕಿಮಠ ಅಭಿಪ್ರಾಯಪಟ್ಟರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ಆಶ್ರಯದಲ್ಲಿ ಮಂಗಳವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್‌ಎಸ್‌ಎಸ್‌ ಶಿಬಿರವು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸೇವಾ ಮನೋಭಾವನೆ ಕಲಿಸುತ್ತದೆ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸಲು ಸಹಾಯ ಮಾಡಲಿದೆ ಎಂದು ಹೇಳಿದರು. 

ಭಿತ್ತಿಚಿತ್ರದ ಸಹಾಯದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ದೃಶ್ಯಕಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ಎನ್‌ಎಸ್‌ಎಸ್‌ ಉದ್ದೇಶವಾಗಿದ್ದು,ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯವಂತರು ರಕ್ತದಾನ ಮಾಡುವಂತೆ ಶಿವವೀರ ಕುಮಾರ್‌ ಕರೆ ನೀಡಿದರು.

ಶೈಕ್ಷಣಿಕ ಜೀವನ ಮುಗಿದ ನಂತರವೂ ಶಿಬಿರದಿಂದ ಕಲಿತ ಮೌಲ್ಯಗಳನ್ನು ಮರೆಯದೇ ಸಮಾಜದ ಸೇವೆಯಲ್ಲಿ ತೊಡಗುವ ಮೂಲಕ ದೇಶಕ್ಕೆ ಉತ್ತಮ ನಾಗರಿಕರಾಗುವಂತೆ ಕಿವಿಮಾತು ಹೇಳಿದರು.

`ಭಿತ್ತಿಚಿತ್ರಕಲೆ’ ಕುರಿತು ಉಪನ್ಯಾಸ ನೀಡಿದ ದೃಶ್ಯಕಲಾ ವಿವಿಯ ಬೋಧನಾ ಸಹಾಯಕ ದತ್ತಾತ್ರೇಯ ಎನ್‌.ಭಟ್‌ ಅವರು, `ಭಾರತದಲ್ಲಿ ಭಿತ್ತಿಚಿತ್ರ ಕಲೆಗೆ ಪುರಾತನ ಕಾಲದಿಂದಲೂ ಪಾರಂಪರಿಕ ಇತಿಹಾಸವಿದೆ’ ಎಂದು ಹೇಳಿದರು.

ಪುಸ್ತಕ ಮತ್ತು ತಾಳೆಗರಿ ಇಲ್ಲದ ಕಾಲದಲ್ಲಿ ಭಿತ್ತಿಚಿತ್ರಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಸುಮಾರು 4 ರಿಂದ 18ನೇ ಶತಮಾನದವರೆಗೆ ಈ ಕಲಾಕೃತಿಗಳು ಕಂಡು ಬರುತ್ತವೆ ಎಂದರು.

ಸ್ಥಳೀಯ ಸಂಸ್ಕೃತಿ ಹಾಗೂ ಆಚರಣೆಯ ಪ್ರತಿರೂಪದಂತೆ ಭಿತ್ತಿಚಿತ್ರಗಳು ರಚನೆಯಾಗಿರುತ್ತವೆ ಎಂದ ಅವರು, ಚಿತ್ರಸೂತ್ರ ಅಧ್ಯಾಯದಲ್ಲಿದ್ದ ಭಿತ್ತಿಚಿತ್ರ ಕಲೆ ರಚಿಸುವ ವಿಧಾನವನ್ನು ವಿವರಿಸಿದರು.

ಪ್ರಸಕ್ತ ದಿನಗಳಲ್ಲಿ ನಮ್ಮ ಅಜ್ಞಾನ ಮತ್ತು ಅಲಕ್ಷ್ಯದಿಂದ ಈ ಸುಂದರ ಚಿತ್ರ ಕಲೆ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುರಾತನ ಇತಿಹಾಸ ಹೊಂದಿದ ಇಂತಹ ಕಲೆಯನ್ನು ಉಳಿಸಿ – ಬೆಳಸಿದರೇ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಶಿಬಿರಾಧಿಕಾರಿ ಡಾ. ಸತೀಶ್‌ ಕುಮಾರ್‌ ಪಿ ವಲ್ಲೇಪುರೆ, ಸಹ ಶಿಬಿರಾರ್ಥಿ ಗಿರೀಶ್‌ ಕುಮಾರ್‌ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!