ಬುದ್ಧೋಪದೇಶ ಅಳವಡಿಸಿದರೆ ಬದುಕು ಆನಂದಮಯ : ಶಿವನಕೆರೆ ಬಸವಲಿಂಗಪ್ಪ

ಬುದ್ಧೋಪದೇಶ ಅಳವಡಿಸಿದರೆ ಬದುಕು ಆನಂದಮಯ : ಶಿವನಕೆರೆ ಬಸವಲಿಂಗಪ್ಪ

ದಾವಣಗೆರೆ, ಮೇ 23- ಬುದ್ಧೋಪದೇಶ ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕನ್ನು ಆನಂದಮಯವಾಗಿಸಿಕೊಳ್ಳ ಬಹುದು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯ ದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಐಕ್ಯೂಎಸಿ ಸಾಂಸ್ಕೃತಿಕ ಸಮಿತಿ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ `ದುಃಖದಿಂದ ಪರಮಾನಂದದ ಕಡೆಗೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವುದೇ ಮುಕ್ತಿಯ ಮೊದಲ ಹೆಜ್ಜೆ. ಬುದ್ಧ ಜಗತ್ತಿಗೆ ನೀಡಿದ ಅನನ್ಯ ಕೊಡುಗೆ ಎಂದರೆ, ದುಃಖ ಇದೆ. ದುಃಖಕ್ಕೆ ಕಾರಣ, ದುಃಖ ನಿವಾರಣೆ ಮತ್ತು ದುಃಖ ನಿವಾರಣೆ ಮಾರ್ಗಗಳು ಎಂಬ 4 ನಿತ್ಯ ಸತ್ಯಗಳೇ ಆಗಿವೆ. ಇವುಗಳನ್ನು ಆರ್ಯ ಸತ್ಯ ಎಂದು ಕರೆಯುತ್ತಾರೆ ಎಂದು ತಿಳಿಸಿದರು.

ದುಃಖ ನಿವಾರಣೆಗೆ ಒಯ್ಯುವ ಮಾರ್ಗವನ್ನು ಅಷ್ಟಾಂಗ ಮಾರ್ಗ ಎಂದು ಗುರುತಿಸಲಾಗಿದೆ. ಸರಿಯಾದ ತಿಳಿವಳಿಕೆ, ಸರಿಯಾದ ಯೋಚನೆ, ಸರಿಯಾದ ಮಾತು, ಸರಿಯಾದ ಕ್ರಮ, ಸರಿಯಾದ ಜೀವನೋಪಾಯ, ಸರಿಯಾದ ಪ್ರಯತ್ನ, ಸರಿಯಾದ ಜಾಗೃತಿ ಮತ್ತು ಸರಿಯಾದ ಧ್ಯಾನವೇ ಅಷ್ಟಾಂಗ ಮಾರ್ಗಗಳು ಎಂದು ವಿವರಿಸಿದರು.

ಅಷ್ಟಾಂಗ ಮಾರ್ಗಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ `ಪಂಚಶೀಲ’ ವನ್ನು ಇದಕ್ಕೆ ಪೂರಕವಾಗಿ ಬೋಧಿಸುತ್ತಾರೆ. ಪ್ರಾಣಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಸಂಬಂಧವನ್ನು ಹೊಂದದಿರುವುದು, ಸುಳ್ಳು, ಚಾಡಿ ಹೇಳದಿರುವುದು, ಹೆಂಡ, ಸುರೆ ಮುಂತಾದ ಮತ್ತು ಭರಿಸುವ ಪಾನೀಯಗಳನ್ನು ಸೇವಿಸದೇ ಇರುವುದಾಗಿದೆ ಎಂದು ಹೇಳಿದರು.

ದುಃಖವನ್ನು ಕೊನೆಗಾಣಿಸುವುದಕ್ಕೆ ಒಂದು ದಾರಿಯುಂಟು ಎಂಬುವುದೇ ಗೌತಮನು ಕಂಡ ನಾಲ್ಕನೇಯ ಸತ್ಯ. ಬುದ್ದೋಪದೇಶಗಳನ್ನು ಜೀವನದಲ್ಲಿ ಅನು ಸರಿಸಿದರೆ, ಆನಂದಮಯ ವಾಗಿರಬಹುದು. ಇಲ್ಲದಿದ್ದರೆ ದುಃಖ ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಬುದ್ಧನ ಜೀವ ನಾನಂದದ ಸೂತ್ರಗಳ ಬಗ್ಗೆ ವಿವರಿಸಿದರು.

ಪ್ರಾಚಾರ್ಯರಾದ ಕಮಲ ಸೊಪ್ಪಿನ ಮಾತನಾಡಿ, ಬುದ್ಧ ಸುಮಾರು 38 ಮಂಗಳಕರವಾದ ಸೂಕ್ತಿಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಮೊದಲನೆಯದು ಮೂರ್ಖರ ಸಂಘವನ್ನು ಮಾಡಬಾರದು. ಎರಡನೇಯದು ಜ್ಞಾನಿಗಳ ಸಂಘವನ್ನು ಮಾಡಬೇಕು. ಇಂತಹ ಸೂಕ್ತಿಗಳನ್ನು ಅಳವಡಿಸಿಕೊಂಡರೆ ಖಂಡಿತಾ ಪರಮಾನಂದದ ಕಡೆಗೆ ಸಾಗಬಹುದು. ಅದಕ್ಕಾಗಿ ನಮ್ಮ  ಮನಸ್ಸನ್ನು ನಾವು ಹೇಳಿದಂತೆ ಕೇಳುವಂತೆ ಮಾಡಿಕೊಳ್ಳಬೇಕು ಎಂದರು.

ಕಾಲೇಜಿನ ಐಕ್ಯೂಎಸಿ ಕೋ-ಆರ್ಡಿನೇಟರ್ ಆರ್.ಆರ್. ಶಿವಕುಮಾರ್ ಮಾತನಾಡಿ, ಬುದ್ಧನ ನಡೆ-ನುಡಿಗಳನ್ನು ಸ್ವಲ್ಪಮಟ್ಟಿಗಾದರೂ ಅನುಸರಿಸುತ್ತಿರುವುದ ರಿಂದ ಪ್ರಸ್ತುತ ಆನಂದ ಪಡೆಯುತ್ತಿದ್ದೇವೆ. ಇಲ್ಲದಿದ್ದರೆ ಇಡೀ ಜೀವನವೇ ದುಃಖಮಯ ವಾಗುತ್ತಿತ್ತು. ಆದ್ದರಿಂದ ನಮ್ಮ ನಮ್ಮ ದುಃಖಗಳೇನು? ಅವುಗಳಿಗೆ ಕಾರಣವೇನು? ಎಂಬುದನ್ನು ತಿಳಿದು ನಾವೇ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಡಾ.ಆರ್.ಜಿ. ಕವಿತಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. 

error: Content is protected !!