ದಾವಣಗೆರೆ, ಮೇ 23- ಭದ್ರಾ ಅಣೆಕಟ್ಟೆಯಿಂದ ತುಂಗಾ ನದಿಗೆ ದಿನಾಲು 2000 ಕ್ಯೂಸೆಕ್ಸ್ ನೀರು ಬಿಡಲು ಸರ್ಕಾರ ಆದೇಶ ಹೊರಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ರೈತ ಒಕ್ಕೂಟ ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ.
ಹೊರ ದೇಶದಲ್ಲಿದ್ದ ಎಸ್ಸೆಸ್ಸೆಮ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಸರ್ಕಾರದ ಜೊತೆ ಮಾತನಾಡಿ, ಭದ್ರಾ ಅಣೆಕಟ್ಟೆಯಿಂದ ತುಂಗಾ ನದಿಗೆ ನೀರು ಬಿಡಬಾರದೆಂಬ ಮರು ಆದೇಶ ಮಾಡಿಸಿ, ನಾನು ಅಚ್ಚುಕಟ್ಟಿನ ರೈತರ ಬೆಂಬಲಕ್ಕೆ ಇರುತ್ತೇನೆಂದು ಹೇಳಿರುವುದು ರೈತರಲ್ಲಿ ಹರ್ಷ ತಂದಿದೆ. ಇದಕ್ಕಾಗಿ ಭಾರತೀಯ ರೈತ ಒಕ್ಕೂಟದ ಪರವಾಗಿ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್, ಪದಾಧಿಕಾರಿಗಳಾದ ಕೊಂಡಜ್ಜಿ ಶಾನಭೋಗರ ನಾಗರಾಜರಾವ್, ಮಂಜುನಾಥ್ ಕುಂದುವಾಡ, ಮಹೇಶ್, ಪುನೀತ್, ಹನುಮಂತಪ್ಪ ಮತ್ತಿತರರು ಸಚಿವರನ್ನು ಅಭಿನಂದಿಸಿದ್ದಾರೆ.