ಜಗಳೂರು, ಮೇ 23- ಜಗತ್ತಿಗೆ ಶಾಂತಿ ಮತ್ತು ಅಹಿಂಸೆ ಪ್ರತಿಪಾದನೆ ಮಾಡಿದ ಭಗವಾನ್ ಗೌತಮ ಬುದ್ಧ ಅವರ ಆದರ್ಶ ನಮ್ಮೆಲ್ಲರ ಜೀವನಕ್ಕೆ ಸ್ಪೂರ್ತಿ ಎಂದು ಪ್ರಾಚಾರ್ಯ ಎ.ಡಿ. ನಾಗಲಿಂಗಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಮಾನವ ಬಂಧುತ್ವ ವೇದಿಕೆಯಿಂದ ನಡೆದ ಗೌತಮ ಬುದ್ಧ ಪೂರ್ಣಿಮ ಆಚರಿಸಿ ಅವರು ಮಾತನಾಡಿದರು.
ಅಧಿಕಾರ, ಅಂತಸ್ತು, ಅಹಂ ಮತ್ತು ಸುಳ್ಳನ್ನು ತ್ಯಜಿಸಿದ ಭಗವಾನ್ ಬುದ್ಧ; ಆಸೆಗಳಿಂದ ದೂರವಿರಿ, ಆಸೆಯೇ ದುಃಖಕ್ಕೆ ಮೂಲ. ಅಹಿಂಸೆಯಿಂದ ಮಾತ್ರ ಶಾಂತಿ ಲಭಿಸಲು ಸಾಧ್ಯ ಎಂದು ಹೇಳಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ್ದಾರೆ ಎಂದರು.
ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಮರೇನಹಳ್ಳಿ ಬಸವರಾಜ್ ಮಾತ ನಾಡಿ, ಜಗತ್ತಿನ ಮಹಾನ್ ಪುರುಷರಾದ ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಜ್ಯೋತಿ ಬಾ ಫುಲೆ ಅಂತಹ ಮಹಾನ್ ನಾಯಕರು ಗೌತಮ ಬುದ್ಧರಿಂದ ಪ್ರೇರೇಪಿತರಾಗಿದ್ದಾರೆ. ಆದ್ದರಿಂದ ಅವರ ಸಂದೇಶ ಸಮಾಜಕ್ಕೆ ತಿಳಿದರೆ ಮನುಷ್ಯ ಆಸೆ ಮತ್ತು ಅಸೂಯೆ ಯನ್ನು ತ್ಯಜಿಸಲು ಸಾಧ್ಯ ಎಂದು ಹೇಳಿದರು.
ಸರಳ ಜೀವನ, ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಯ ಮೂಲಕ ನಾವು ಸಮಾಜವನ್ನು ಕಟ್ಟ ಬೇಕಿದೆ ಎಂದು ಸಲಹೆ ನೀಡಿದರು.
ಪ್ರಗತಿಪರ ಹೋರಾಟಗಾರ ಆರ್. ಓಬಳೇಶ್ ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಭಗವಾನ್ ಬುದ್ಧರ ಸಂದೇಶಗಳನ್ನು ಪ್ರತಿ ಶಾಲಾ- ಕಾಲೇಜುಗಳಲ್ಲಿ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಧನ್ಯಕುಮಾರ್, ಎಸ್ಸಿ, ಎಸ್ಟಿ ಪತ್ರಿಕಾ ವರದಿಗಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿ. ಬಸವರಾಜ್, ವಕೀಲ ಸಣ್ಣ ಓಬಯ್ಯ, ತಿಪ್ಪೇಸ್ವಾಮಿ, ಗ್ರಾ.ಪಂ. ಸದಸ್ಯ ಹೊನ್ನಮರಡಿ ವಕೀಲ ರುದ್ರೇಶ್, ಪಂಪಾಪತಿ, ಭೂಪತಿ, ತಿಪ್ಪೇಸ್ವಾಮಿ, ಕರಿಬಸಪ್ಪ, ಮಾದಿಹಳ್ಳಿ ಮಂಜುನಾಥ್ ಮತ್ತಿತರರಿದ್ದರು.