ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸರ್ಜಿ ಅವರಿಗಿದೆ : ಮಾಜಿ ಶಾಸಕ ರೇಣುಕಾಚಾರ್ಯ
ಹೊನ್ನಾಳಿ, ಮೇ 23- ಸರ್ಕಾರದ ವೈಫಲ್ಯ ಎತ್ತಿ ಹಿಡಿದು, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಾಮರ್ಥ್ಯ ಡಾ. ಧನಂಜಯ ಸರ್ಜಿ ಅವರಿಗಿದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರ ಗೆಲುವು ಶತಸಿದ್ಧ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಇಲ್ಲಿನ ಟಿ.ಬಿ. ವೃತ್ತದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ನೈರುತ್ಯ ಪದವೀಧರರ ಕ್ಷೇತ್ರ ಆರಂಭ ಆದಾಗಿನಿಂದ ಈವರೆಗೆ ನಡೆದ 6 ಚುನಾವಣೆ ಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಆದ್ದರಿಂದ ಪಕ್ಷವು ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಪದವೀಧರರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಧನಂಜಯ ಸರ್ಜಿ ಅವರನ್ನು ಗೆಲ್ಲಿಸಿ ಎಂದರು.
ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಪದವೀಧರರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಆದ್ದರಿಂದ ವಿಧಾನ ಪರಿಷತ್ಗೆ ನನ್ನನ್ನು ಆಯ್ಕೆ ಮಾಡಿದರೆ, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಹಿಂದುಳಿದ ವರ್ಗದ ಮೋರ್ಚಾದ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ, ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಮಾಲತೇಶ್, ಖಜಾಂಚಿ ಎನ್.ಡಿ. ಸತೀಶ್, ಮುಖಂಡರಾದ ಸಿ.ಆರ್. ಶಿವಾನಂದ್, ದೊಡ್ಡೇರಿ ರಾಜಪ್ಪ, ಕುಳಗಟ್ಟೆ ರಂಗಪ್ಪ, ಸುರೇಂದ್ರ ನಾಯ್ಕ್, ಅಜಯ್ ಚೀಲೂರ್, ದಿಡಗೂರು ಪಾಲಾಕ್ಷಪ್ಪ, ಶಾಂತರಾಜ್ ಮತ್ತಿತರರಿದ್ದರು.