ಹರಿಹರ, ಮೇ 22 – ನಗರದ ಭಾಗೀರಥಿ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಲ್ಲಿ ರುವ ಚರಂಡಿಯಲ್ಲಿನ ನೀರು ಸರಾಗವಾಗಿ ಹರಿದು ಹೋಗದೆ, ಮಳೆ ಬಂದ ಸಮಯದಲ್ಲಿ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಈ ವೇಳೆ ಹೆಚ್.ಪಿ. ದೇವರಾಜ್ ಮಾತನಾಡಿ, ಇಲ್ಲಿನ ನಗರಸಭೆ ವತಿಯಿಂದ ಆರು ಅಡಿ ಚರಂಡಿ ನಿರ್ಮಾಣ ಮಾಡಿದ್ದು, ಪೌರ ಕಾಮಿಕರ ಬಡಾವಣೆ, ಡಾ. ಹೆಗಡೆ ಕಾಂಪೌಂಡ್ ಸೇರಿದಂತೆ ಅಕ್ಕ ಪಕ್ಕದ ಬಡಾವಣೆ ನೀರು ಈ ಚರಂಡಿ ಮೂಲಕ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ನಿನ್ನೆ ಬೃಹತ್ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ, ನಮ್ಮ ಅಂಗಡಿ ಬಾಗಿಲ ಬಳಿ ನೀರು ಬಂದು ನಿಂತಿದೆ. ಇನ್ನೂ ಸ್ವಲ್ಪ ಜೋರಾಗಿ ಮಳೆ ಬಂದಿದ್ದರೆ ಚರಂಡಿಯ ನೀರು ಅಂಗಡಿ ಒಳಗಡೆ ಬಂದು ದಾಸ್ತಾನು ನೀರಿನಲ್ಲಿ ಮುಳುಗಿ ಹೋಗುತ್ತಿತ್ತು ಎಂದರು.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದುವರೆಗೂ ಯಾರೂ ನಮಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಇನ್ನೂ ಒಂದು ದಿನ ನೋಡಿ, ನಂತರ ನಾಳೆ ಜಿಲ್ಲಾಧಿಕಾರಿಗಳ ಕಚೇರಿಗೆ ಎಲ್ಲಾ ದಾಖಲೆಗಳನ್ನು ಒದಗಿಸುವೆ ಜೊತೆಗೆ, ನಾನು ಕಳೆದ ತಿಂಗಳ ನಗರಸಭೆಗೆ 1 ಲಕ್ಷದ 95 ಸಾವಿರ ರೂಪಾಯಿ ಕಂದಾಯ ಕಟ್ಟಿದ್ದು, ನಮಗೆ ಒಂದು ಚಿಕ್ಕ ಚರಂಡಿ ಸಮಸ್ಯೆಯನ್ನು ಅಧಿಕಾರಿಗಳು ಬಗೆ ಹರಿಸುವುದಕ್ಕೆ ಮುಂದಾಗದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಹೇಳಿದರು.
ಗುತ್ತಿಗೆದಾರ ಬಾಷಾ ಮಾತನಾಡಿ, ಅಧಿಕಾರಿಗಳ ಮಾರ್ಗದರ್ಶನದ ಪ್ರಕಾರ ಕಾಮಗಾರಿ ಮಾಡಲಾಗಿರುತ್ತದೆ. ಚರಂಡಿ ನೀರು ಮುಂದಕ್ಕೆ ಸರಾಗವಾಗಿ ಹೋಗುವುದಕ್ಕೆ ಮಾಡುವ ಕೆಲಸಕ್ಕೆ ಕೆಲವು ಆಸ್ತಿ ಮಾಲೀಕರು ಅಡ್ಡಿ ಪಡಿಸಿದರು. ಹಾಗಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಎಡಗಡೆ ಭಾಗದಲ್ಲಿ ದೊಡ್ಡ ಚರಂಡಿ ಇರುತ್ತದೆ. ಅದಕ್ಕೆ ಇದನ್ನು ಜಾಯಿಂಟ್ ಮಾಡಿದರೆ ಸರಿಹೋಗುತ್ತದೆ. ಅಧಿಕಾರಿಗಳು ತಿಳಿಸಿದರೆ ಆ ಕೆೆಲಸ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುಜಿಡಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.