ದಾವಣಗೆರೆ, ಮೇ 22- ಹೈನು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎನ್.ಎಲ್.ಎಂ ಯೋಜನೆಯ ಅನುದಾನದಡಿ ಕರ್ನಾಟಕ ಸಹಕಾರ ಹಾಲು ಮಹಾಮಂಡಳವು ಶಿಮುಲ್ಗೆ ರೂ. 1.20 ಕೋಟಿ ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್ಗಳನ್ನು ನೀಡಿದೆ.
ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಕಡಿಮೆಯಾದ್ದರಿಂದ ದುಬಾರಿ ಬೆಲೆ ತೆತ್ತು ಮೇವನ್ನು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಪ್ರಾರಂಭವಾಗುವ ಮುನ್ನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ವಿವಿಧ ಮೇವಿನ ತಳಿಗಳ 3.5 ಕೆ.ಜಿ ಕಿರು ಪೆೋಟ್ಟಣಗಳನ್ನು (ಮಿನಿ ಕಿಟ್) ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ.
ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಮೇವಿನ ಬೀಜದ ಕಿರು ಪೆೋಟ್ಟಣಗಳನ್ನು ವಿತರಿಸಿ ಹೆಚ್ಚು ಹಸಿರು ಮೇವು ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲು ಯೋಜಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಮೇವಿನ ಬೀಜದ ಮಿನಿ ಕಿಟ್ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.