ದಾವಣಗೆರೆ, ಮೇ 22- ಸೇವಾ ನ್ಯೂನತೆಗಾಗಿ ರೂ.24,500/- ಗಳ ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಟೂರಿಸ್ಟ್ ಸಂಸ್ಥೆಗೆ ಆದೇಶಿಸಿದೆ.
ನಗರದ ಸತೀಶ್ ಕುಮಾರ್ ಎಂಬುವರು ಹರ್ಷ ಟೂರಿಸ್ಟ್ ಸಂಸ್ಥೆಯ ಮೂಲಕ ಸೆಪ್ಟೆಂಬರ್-2023 ರಲ್ಲಿ ಪ್ರವಾಸ ಕೈಗೊಂಡಿದ್ದರು. ಟೂರಿಸ್ಟ್ ಸಂಸ್ಥೆ ನೀಡಿದ ಭರವಸೆಯಂತೆ ಯಾವುದೇ ಆರಾಮದಾಯಕ ಪ್ರವಾಸದ ಸೇವೆ ನೀಡದೇ, ಸೇವಾ ನ್ಯೂನತೆಯನ್ನು ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರನ್ನು ಪರಿಗಣಿಸಿ, ಎದುರುದಾರ ಸಂಸ್ಥೆಗೆ ನೋಟಿಸ್ ನೀಡಲಾಗಿ, ಸಂಸ್ಥೆಯವರು ಗ್ರಾಹಕರ ಆಯೋಗದ ಮುಂದೆ ತಮ್ಮ ಯಾವುದೇ ಪ್ರತಿರೋಧವನ್ನು ನಿವೇದಿಸಿಕೊಳ್ಳದೇ ಇರುವುದರಿಂದ, ವಸ್ತುಸ್ಥಿತಿಗಳ ಮತ್ತು ದೂರುದಾರರ ಅಹವಾಲನ್ನು ಮತ್ತು ಪ್ರಕರಣದ ವಿಷಯಗಳನ್ನು ಪರಿಶೀಲಿಸಿ ಆಯೋಗದ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಬಿ.ಯು. ಗೀತಾ ಇವರು ತೀರ್ಪು ನೀಡಿದ್ದಾರೆ.