ಮಲೇಬೆನ್ನೂರು, ಮೇ 21- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾಗಿದ್ದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಕಳೆದ ವಾರ ನಿಧನರಾಗಿದ್ದು, ಅವರಿಗೆ ನಾಳೆ ದಿನಾಂಕ 22ರ ಬುಧವಾರ ಬೆಳಿಗ್ಗೆ 10.30ಕ್ಕೆ ಬ್ರಹ್ಮಾಕುಮಾರೀಸ್ ಆಶ್ರಮದಲ್ಲಿ ನುಡಿ ನಮನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಳೆಸಿರಿಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತಾಜೀ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾ ಕುಮಾರ ಡಾ. ಬಸವರಾಜ ರಾಜಋಷಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ದಾವಣಗೆರೆಯ ಜಡೇ ಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು ಎಂದರು. ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ
ವಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜೀ ಅಧ್ಯಕ್ಷತೆ ವಹಿಸಲಿದ್ದು, ಶಿರಸಿ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಶಾಸಕ ಬಿ.ಪಿ ಹರೀಶ್, ಮಾಜಿ ಶಾಸಕ ರಾದ ಹೆಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಹಿರಿಯ ವೈದ್ಯ ಡಾ. ಎಂ.ಹನುಮಂತಪ್ಪ, ಬಿ.ಎಂ. ಕರೇಗೌಡ್ರು (ಬೆಂಗಳೂರು), ಅಕ್ಕಿ ಉದ್ಯಮಿ ಬಿ.ಕೆ. ಪಂಚಪ್ಪ, ಹಾಲಿವಾಣದ ಎಸ್.ಜಿ. ಪರಮೇಶ್ವರಪ್ಪ, ಹೊಳೆಸಿರಿಗೆರೆಯ ಎನ್.ಜಿ. ನಾಗನಗೌಡ್ರು, ನಿವೃತ್ತ ಡಿಡಿಪಿಐ ಕೆ.ಬಿ. ರಾಮಲಿಂಗಪ್ಪ, ವರ್ತಕ ಹೆಚ್.ಎಸ್. ರುದ್ರಯ್ಯ ಅವರುಗಳು ನುಡಿ ನಮನ ಸಲ್ಲಿಸಲಿದ್ದಾರೆ.
ದಾವಣಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ ಎಂದು ಶಾಂತಾಜೀ ಮಾಹಿತಿ ನೀಡಿದರು.
ಪರಮಾತ್ಮನ ಸೇವೆಯೇ ಮಂಜುಳಾಜಿಯವರ ಬದುಕಾಗಿತ್ತು. ಅವರು ತಮ್ಮ ಸರಳತೆ, ಪ್ರೀತಿಯಿಂದ ಮಲೇಬೆನ್ನೂರು ಭಾಗದ ಜನರ ಹೃದಯ ಗೆದ್ದಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸಿದ್ದು, ಮಲೇಬೆನ್ನೂರು, ಹೊಳೆಸಿರಿಗೆರೆ ಮತ್ತು ಹಾಲಿವಾಣದಲ್ಲಿ ಈಶ್ವರೀಯ ವಿವಿ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದರಲ್ಲಿ ಮಂಜುಳಕ್ಕನವರ ಶ್ರಮ ಅಪಾರವಾಗಿದೆ ಎಂದು ಬಿ.ಪಂಚಪ್ಪ ತಿಳಿಸಿದರು.
ವೈ.ಎನ್. ಹೊಸಕೋಟೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ರಾಜಶ್ರೀ, ಹೆಚ್.ಎಸ್. ರುದ್ರಯ್ಯ, ಜಿಗಳಿ ಇಂದೂಧರ್, ಪೂಜಾರ್ ರೇವಣಪ್ಪ, ಕೆ.ಪಿ. ಕೆಂಚಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.