ದಾವಣಗೆರೆ, ಮೇ 21- ಬಿಸಿಲಿನ ಪ್ರಖರತೆಗೆ ಒಣಗಿ ನಾಶವಾದ ಕಬ್ಬಿನ ಬೆಳೆಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತ, ಜಿಲ್ಲಾ ರೈತರ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದಿಂದ ಜಂಟಿಯಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಅವೈಜ್ಞಾನಿಕ ಭದ್ರಾ ವೇಳಾ ಪಟ್ಟಿಯಿಂದ ಈ ಭಾಗದ ರೈತರಿಗೆ ನೀರು ಸಿಗಲಿಲ್ಲ ಮತ್ತು ಅಂತರ್ಜಲದ ಮಟ್ಟ ಕ್ಷೀಣಿಸಿದ ಪರಿಣಾಮ ಬಿಸಿಲಿನ ಝಳ ಹಾಗೂ ಉಷ್ಣದ ಹವೆಗೆ ರೈತನ ಬೆಳೆ ನಾಶವಾಗಿದೆ ಎಂದು ಹೇಳಿದರು.
ರೈತರು ಸಾಲ ಮಾಡಿ ಬೆಳೆದ ಕಬ್ಬು ಸಂಪೂರ್ಣವಾಗಿ ಒಣಗಿದ್ದರಿಂದ ರೈತನ ಬದುಕು ಸಂಕಷ್ಟಕ್ಕೀಡಾಗಿದೆ. ಆದ್ದರಿಂದ ರೈತನ ಬದುಕಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಸುಮಾರು 45 ಸಾವಿರ ರೂ.ಗಳು ಖರ್ಚಾಗುವ 1 ಎಕರೆ ಕಬ್ಬು ಬೆಳೆಗೆ, ರೈತ ಸಾಲ ಮಾಡಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾನೆ ಎಂದ ಅವರು, ಒಟ್ಟು 1069 ರೈತರ, ಸುಮಾರು 2070 ಎಕರೆ ಕಬ್ಬಿನ ಬೆಳೆ ನಾಶವಾಗಿದೆ ಎಂದು ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದವರು ಅಂದಾಜಿಸಿದ್ದಾರೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಸಕ್ಕರೆ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಅಭಿಜಿತ್ ಶಾಮನೂರು, ಜಿಲ್ಲಾ ರೈತರ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡರಾದ ಹದಡಿ ಜಿ.ಸಿ. ನಿಂಗಪ್ಪ, ಚಂದ್ರಶೇಖರ ಪೂಜಾರ, ಕುಕ್ಕುವಾಡದ ಡಿ.ಬಿ. ಶಂಕರ್, ಡಿ.ಬಿ. ಅರವಿಂದ, ಕೆ.ಸಿ. ಉಮೇಶ್, ಯು.ಸಿ. ನಾಗರಾಜ್, ದೂಳೆಹೊಳೆ ವಾಗೀಶ್ ಇತರರಿದ್ದರು.