ಸುಪ್ರಿಂ ಆದೇಶದಂತೆ ಬೃಹದಾಕಾರದ ಹಂಪ್ಸ್ ತೆರವುಗೊಳಿಸಿ ಜೀವ ಉಳಿಸಿ

ಸುಪ್ರಿಂ ಆದೇಶದಂತೆ ಬೃಹದಾಕಾರದ ಹಂಪ್ಸ್ ತೆರವುಗೊಳಿಸಿ ಜೀವ ಉಳಿಸಿ

ರಾಣೇಬೆನ್ನೂರು, ಮೇ 19- ಹೆದ್ದಾರಿಗಳಲ್ಲಿ ಹಂಪ್ಸ್ ಅಳವಡಿಸಬಾರದೆಂದು ಸುಪ್ರಿಂ ಕೋರ್ಟಿನ ಕಟ್ಟುನಿಟ್ಟಿನ ಆದೇಶವಿದ್ದರೂ ಸಹ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದವರ ಮತ್ತು ಗುತ್ತಿಗೆದಾರರ ಒಳಒಪ್ಪಂದದಿಂದ ಹೆದ್ದಾರಿಗಳಲ್ಲಿ ಎಲ್ಲೊಂದರಲ್ಲಿ ಬೃಹದಾಕಾರದ ಹಂಪ್ಸ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದು ಅಮಾಯಕರ ಜೀವದೊಂದಿಗೆ ಚಲ್ಲಾಟವಾಡುವ ಬೇಜವಾಬ್ದಾರಿ ವರ್ತನೆಯಾಗಿದೆ. ಕೂಡಲೇ ಈ ಹಂಪ್ಸ್‌ಗಳನ್ನು ತೆರವುಗೊಳಿಸಿ, ಇವರ ಕರ್ತವ್ಯಲೋಪದಿಂದ ಈಗಾಗಲೇ ಇಂತಹ ಅವೈಜ್ಞಾನಿಕ ಅನೇಕ ಹಂಪ್ಸ್‌ಗಳಿಂದ ರಸ್ತೆ ಅಪಘಾತಗಳಾಗಿ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ಪಡೆದ ಬಿಲ್ಡ್‍ಕಾನ್ ಕಂಪನಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದರು. 

ಇಲ್ಲಿನ ತಹಶೀಲ್ದಾರ್‌ರ ಕಛೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಹರಿಹರ – ಸಮ್ಮಸಗಿ ರಸ್ತೆ (ಹಲಗೇರಿ-ಕೋಡ ಮಧ್ಯ) ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಅವೈಜ್ಞಾನಿಕ ರಸ್ತೆ ನಿರ್ಮಾಣ ಅನಾವಶ್ಯಕ ರೋಡ್ ಹಂಪ್ಸ್‌ (ದಿಬ್ಬ ನಿರ್ಮಾಣ) ರಸ್ತೆ ಸುರಕ್ಷತೆಯ ಸಿಗ್ನಿಲ್‍ಗಳಿಲ್ಲದೇ ನಿರ್ಮಾಣವಾಗಿರುವ ರಸ್ತೆ ಅವಾಂತರದಿಂದ ಆಗುತ್ತಿರುವ ಅಪಘಾತಗಳು ಸಾವು – ನೋವು ಗಳನ್ನು ತಪ್ಪಿಸಲು ಹಂಪ್ಸ್‌ಗಳನ್ನು ತೆರವುಗೊಳಿಸಿ, ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಅವರು ಒತ್ತಾಯಿಸಿದರು.

ಈಗಾಗಲೇ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ 2018 ರ ಏಪ್ರಿಲ್ 10 ರಿಂದ 2024 ರ ಏಪ್ರಿಲ್ 10 ರ ಕೇವಲ ಈ 6 ವರ್ಷಗಳ ಅವಧಿ ಯಲ್ಲಿ ಒಟ್ಟು 235 ರಸ್ತೆ ಅಪಘಾತಗಳಾಗಿ ಅದರಲ್ಲಿ 80 ಲಘು ಅಪಘಾತಗಳಾದರೆ, 155 ಮಾರಣಾಂತಿಕ ಅಪಘಾತ ಗಳಾಗಿವೆ. ಅದರಲ್ಲಿ 63 ಜನ ಸಾವನ್ನಪ್ಪಿದ್ದಾರೆಂದು ಅಂಕಿ ಅಂಶದ ಸಮೇತ ಸಭೆಗೆ ಪಾಟೀಲರು ಮಾಹಿತಿ ನೀಡಿದರು.

ಸಭೆಯಲ್ಲಿ ಕೆಆರ್‌ಡಿಸಿಎಲ್ ಎಇಇ ಸದಾನಂದ, ಪಿಡಬ್ಲ್ಯೂಡಿ ಎಇಇ ಮರಿಸ್ವಾಮಿ, ದಿಲೀಪ್‍ಬುಲ್ಡ್‍ಕಾನ್ ಕಂಪನಿಯ ಸುಭಾಷ್ ಯಾಧವ್, ಕನ್ಸಲ್ಟೆಂಟ್ ಇಂಜಿನಿಯರ್ ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಶಾಂತಮಣಿ, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಯವರು ಹೆಡಿಯಾಲ್ ಟೋಲ್ ಪ್ಲಾಜಾದವರು ಹಾಜರಿದ್ದರು. 

ತಹಶೀಲ್ದಾರ್ ಟಿ.ಸುರೇಶ್‌ಕುಮಾರ್‌ ಮಾತನಾಡಿ, ವಾರದೊಳಗೆ ಎಲ್ಲಾ ಹಮ್ಸ್‍ಗಳನ್ನು ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಮಾಡಿದರು. 

ಮುಖಂಡರಾದ ಈರಣ್ಣ ಹಲಗೇರಿ ಮಾತನಾಡಿ, ಟೋಲ್‍ನಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ, ಲೈಟಿನ ವ್ಯವಸ್ಥೆ ಇಲ್ಲ, 8-10 ಜಿಲ್ಲೆಗಳಿಗೆ ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅವ್ಯವಸ್ಥೆ ಹೇಳತೀರದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಚಂದ್ರಣ್ಣ ಬೇಡರ, ಎಸ್.ಡಿ.ಹಿರೇಮಠ, ಹರಿಹರಗೌಡ ಪಾಟೀಲ, ಪರ್ವತಗೌಡ ಕುಸಗೂರು, ಕೆ.ಬಿ.ಬಣಕಾರ, ರಾಜು ಕೋರೆರ, ಮಂಜಣ್ಣ ಮೆಣಸಿನಹಾಳ, ಮಂಜು ಶಿವಲಿಂಗಪ್ಪನವರ, ಇಂದ್ರಮ್ಮ ಕಮ್ಮಾರ, ರೇಣುಕಾ ಲಮಾಣಿ, ಶೈಲಾ ಅಂಗಡಿ, ಕವಿತಾ ಕೂಸನೂರ, ಪುಷ್ಪಾ ಅಂಗಡಿ, ಗುರುನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!