ದಾವಣಗೆರೆ, ಮೇ 19- ಹೆಗಡೆ ನಗರದಿಂದ ಸ್ಥಳಾಂ ತರಗೊಂಡ ನಿರಾಶ್ರಿತರಿಗೆ ಪಾಲಿಕೆಯಿಂದ ಬಾಡಿಗೆ ಮನೆ ಒದಗಿಸುವ ಜತೆಗೆ ಬಾಡಿಗೆ ಹಣವನ್ನೂ ಭರಿಸಬೇಕೆಂದು ಸ್ಲಂ ಜನರ ಸಂಘಟನೆಯು ಆಯುಕ್ತರಿಗೆ ಮನವಿ ಸಲ್ಲಿಸಿತು.
ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ಸ್ಲಂ ಮಹಿಳೆಯರ ಸಂಘಟನೆ, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಸಹಯೋಗದಲ್ಲಿ ಜಯದೇವ ವೃತ್ತದಲ್ಲಿ ಜಮಾಯಿಸಿದ ನಿರಾಶ್ರಿತರು ರಾಲಿ ಮೂಲಕ ಪಾಲಿಕೆಗೆ ಹೋದರು.
ಈ ವೇಳೆ ಸಂಘಟನೆಯ ಮುಖಂಡರು ಮಾತನಾಡಿ, ಹೆಗಡೆ ನಗರದಿಂದ ಸ್ಥಳಾಂತರಗೊಂಡ ನಿರಾಶ್ರಿತರ ತಾತ್ಕಾಲಿಕ ತಗಡಿನ ಮನೆಗಳು ಗುರುವಾರ ಬೀಸಿದ ಗಾಳಿ ಮಳೆಗೆ ತೂರಿಹೋಗಿವೆ ಮತ್ತು ಬಟ್ಟೆ-ಬರೆ, ದವಸ-ಧಾನ್ಯಗಳು ಸಂಪೂರ್ಣ ಹಾಳಾಗಿವೆ. ಆದ್ದರಿಂದ ಅಲ್ಲಿ ಸಾವು ನೋವು ಸಂಭವಿಸುವ ಮೊದಲೇ ಪಾಲಿಕೆ ಅಧಿಕಾರಿಗಳು ನಿರಾಶ್ರಿತರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ 3 ತಿಂಗಳಿಗೊಮ್ಮೆ ಸಂತ್ರಸ್ತರ ಕುಂದುಕೊರತೆ ಸಭೆ, ಮೂಲ ಸೌಲಭ್ಯ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.
ಈ ವೇಳೆ ನೆರಳು ಬೀಡಿ ಕಾರ್ಮಿಕರ
ಯೂನಿಯನ್ನ ಅಧ್ಯಕ್ಷೆ ಜಬೀನಾ ಖಾನಂ, ಸ್ಲಂ ಜನರ ಸಂಘಟಣೆಯ ಎಂ. ಕರಿಬಸಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಹೆಗ್ಗೆರೆ ರಂಗಪ್ಪ ಮತ್ತು ಇತರರಿದ್ದರು.