ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಶೀಲ್ದಾರ್ ಹಾಗೂ ಪೌರಾಯುಕ್ತರಿಗೆ ಮನವಿ
ಹರಿಹರ, ಮೇ 19- ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ತುಂಗಭದ್ರಾ ನದಿಯ ಹೊರತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಹಾಗೂ ಪೌರಾಯುಕ್ತ ಐಗೂರು ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹರಿಹರವು ದಕ್ಷಿಣ ಕಾಶಿ, ಮಾಜಿ ಕೈಗಾರಿಕಾ ನಗರ, ಭೌಗೋಳಿಕವಾಗಿ ರಾಜ್ಯದ ಕೇಂದ್ರ ಬಿಂದು, ದಾವಣಗೆರೆ ಜಿಲ್ಲೆಯ 2ನೇ ದೊಡ್ಡ ನಗರವೆಂಬ ಖ್ಯಾತಿಯನ್ನು ಪಡೆದಿದೆ. ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆ, ಹೆಚ್ಚುಗಾರಿಕೆ ಹೊಂದಿರುವ ಹರಿಹರ ನಗರದ ಜನತೆ ಅನಾವೃಷ್ಟಿಯ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಹಪಾಹಪಿಸುವ ದುಸ್ಥಿತಿಗೆ ಬಂದಿರುವುದು ಬೇಸರದ ಸಂಗತಿಯಾಗಿದೆ.
`ಗಂಗಾ ಸ್ನಾನ, ತುಂಗಾ ಪಾನ’ ಎಂಬ ಗಾದೆ ಮಾತು ಜಿಲ್ಲೆಯ ಜೀವ ನದಿ ತುಂಗಭದ್ರ ನದಿಯ ಮಹತ್ವವನ್ನು ಸಾರುತ್ತದೆ. ಇಂತಹ ಪವಿತ್ರ ನದಿಯ ದಡದಲ್ಲಿರುವ ನಗರದ ಒಂದು ಲಕ್ಷಕ್ಕೂ ಹೆಚ್ಚಿನ ಜನತೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಪಾಹಪಿಸುತ್ತಾರೆ.
ಈ ಹಿಂದೆ ನಾಡಿನಾದ್ಯಂತ ಮಳೆ ಉತ್ತಮವಾಗಿರುತ್ತಿತ್ತು. ಬೇಸಿಗೆಯಲ್ಲಿ ನದಿ ಒಣಗಿದರೂ ಸಾಕಷ್ಟು ನೀರು ಸಂಗ್ರಹವಿರುತ್ತಿದ್ದ ಭದ್ರಾ ಜಲಾಶಯದಿಂದ ನದಿಗೆ ನೀರು ಸರಬರಾಜು ಮಾಡುತ್ತಿದ್ದರಿಂದ ನಗರದ ಜನತೆಗೆ ಅನಾವೃಷ್ಟಿಯ ಬೇಸಿಗೆ ಅವಧಿಯಲ್ಲೂ ಕುಡಿಯುವ ನೀರು ಸಿಗುತ್ತಿತ್ತು ಅಷ್ಟೋಂದು ಆಹಾಕಾರ ಕಾಣುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗುತ್ತಿದೆ. ಇದರ ಪರಿಣಾಮ ಪ್ರತಿವರ್ಷ ಮೂರ್ನಾಲ್ಕು ತಿಂಗಳ ಕಾಲ ನಗರದ ಜನತೆ ಹನಿ ನೀರಿಗೂ ಪರದಾಡುವ ದುಸ್ಥಿತಿ ಎದುರಾಗುತ್ತಿದೆ.
ಇದೇ ತುಂಗಭದ್ರಾ ನದಿಯಿಂದ ಜಿಲ್ಲೆ ವಿವಿಧ ತಾಲ್ಲೂಕುಗಳ 50 ರಿಂದ 60 ಕಿ.ಮೀ. ದೂರದ 40ಕ್ಕೂ ಹೆಚ್ಚು ಕೆರೆಗಳ ಒಡಲಿಗೆ ನೀರು ಹರಿಸಲಾಗುತ್ತಿದೆ. ಆ ಮೂಲಕ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರುಣಿಸಲು, ಅಂತರ್ಜಲ ವೃದ್ಧಿಸಲಾಗುತ್ತಿದೆ.
ಪಕ್ಕದ ದಾವಣಗೆರೆ ನಗರದ ಜನತೆಯೆ ಕುಡಿಯುವ ನೀರಿಗಾಗಿ ತುಂಗಭದ್ರ ನದಿಯ ಹೊರತಾಗಿ ಟಿ.ವಿ.ಸ್ಟೇಷನ್ ಕೆರೆ, ಕುಂದವಾಡ ಕೆರೆ ಅಭಿವೃದ್ಧಿಪಡಿಸಲಾಗಿದೆ. ನದಿಯಲ್ಲಿ ನೀರು ಸರಬರಾಜು ಸ್ಥಗಿತಗೊಂಡರೂ ಕೂಡ ದಾವಣಗೆರೆ ನಗರದ 3 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಹಲವು ತಿಂಗಳುಗಳ ಕಾಲ ಈ ಕೆರೆಗಳಲ್ಲಿ ಸಂಗ್ರಹವಾಗುವ ನೀರಿನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ, `ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ಎಂಬ ಗಾದೆ ಮಾತಿನಂತೆ ನದಿ ದಡದಲ್ಲಿದ್ದರೂ ಹರಿಹರದ ಒಂದು ಲಕ್ಷಕ್ಕೂ ಹೆಚ್ಚು ಜನತೆ ಬಹುತೇಕ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಪಾಹಪಿಸುವ ದುಸ್ಥಿತಿ ಎದುರಾಗುತ್ತಿದೆ.
ಈ ಹಿಂದೆ ದಾವಣಗೆರೆ ತಾಲ್ಲೂಕಿನ ಸರಹದ್ದಿಗೆ ಒಳಪಟ್ಟ ಅಗಸನಕಟ್ಟೆ ಕೆರೆಯನ್ನು ಹರಿಹರ ನಗರಕ್ಕೆ ಪರ್ಯಾಯ ಕುಡಿಯುವ ನೀರಿನ ಮೂಲವಾಗಿ ಅಭಿವೃದ್ಧಿ ಪಡಿಸಲು ವಿವಿಧ ಸಂಘಟನೆಗಳು, ಪ್ರಜ್ಞಾವಂತರು ಜಿಲ್ಲಾಡಳಿತ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಆ ಪ್ರಯತ್ನದ ಫಲವಾಗಿ ಅಗಸನಕಟ್ಟೆ ಕೆರೆಯನ್ನು ಈ ದಿಸೆಯಲ್ಲಿ ಅಭಿವೃದ್ಧಿಪಡಿಸಲು ಹರಿಹರ ನಗರಸಭೆಯಿಂದ ಸಂಬಂಧಿತರಿಗೆ ಪ್ರಸ್ತಾವನೆಯನ್ನು ಮೂರು ವರ್ಷಗಳ ಹಿಂದೆ ರವಾನಿಸಲಾಗಿದೆ. ಆದರೆ, ಆ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಇಚ್ಛಾಶಕ್ತಿ ಇಲ್ಲದ ಕಾರಣ ಪ್ರಸ್ತಾವನೆಯು ಧೂಳು ಹಿಡಿದಿದೆ.
ಹರಿಹರ ನಗರಕ್ಕೆ ನದಿಯ ಹೊರತಾಗಿ ಪರ್ಯಾಯ ನೀರಿನ ಮೂಲಗಳನ್ನು ಸೃಷ್ಟಿಸುವ ಸಲುವಾಗಿ ತಾಲ್ಲೂಕು ಆಡಳಿತ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳುವಂತೆ ಒತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮತ್ತು ಪೌರಾಯುಕ್ತರು ಹರಿಹರ ನಗರಕ್ಕೆ ಪರ್ಯಾಯ ಕುಡಿಯುವ ನೀರನ ವ್ಯವಸ್ಥೆ ಅವಶ್ಯಕತೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಹೆಚ್.ಸುಧಾಕರ್, ಕಾರ್ಯದರ್ಶಿ ಹೆಚ್.ಸಿ.ಕೀರ್ತಿಕುಮಾರ್, ಟಿ.ಇನಾಯತ್, ಶೇಖರ್ ಗೌಡ, ಬಿ.ಎಂ.ಚಂದ್ರಶೇಖರ್, ಆರ್.ಮಂಜುನಾಥ್, ವೈ.ನಾಗರಾಜ್, ಮೆಹಬೂಬ್ ಆಡಾನಿ, ಹೆಚ್.ಶಿವಪ್ಪ, ಆರ್.ಬಿ.ಪ್ರವೀಣ್, ಮಂಜಾನಾಯ್ಕ್, ಚಂದ್ರಶೇಖರ್ ಕುಂಬಾರ್, ಇರ್ಫಾನ್, ಜಿ.ಕುಮಾರ್, ವಿಶ್ವನಾಥ ಮೈಲಾಳ್, ಚಿದಾನಂದ ಕಂಚೀಕೇರಿ, ಜಿ.ಎಂ.ಮಂಜುನಾಥ್, ಶಕೀಲ್ ಆಹಮ್ಮದ್, ಆನಂದ್ ಕುಮಾರ್ ಹಾಗೂ ಇತರರಿದ್ದರು.