ಸದೃಢ ಗುರಿಯ ಜತೆಗೆ ಶಿಕ್ಷಕರು ಮತ್ತು ಪೋಷಕರ ಬೆಂಬಲದಿಂದ ಸತತ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ.
– ಕೆ.ಸಿ. ಸಾಗರ್, ಸನ್ಮಾನಿತ ವಿದ್ಯಾರ್ಥಿ
ಹರಪನಹಳ್ಳಿ, ಮೇ 19- ವಿದ್ಯಾರ್ಥಿಗಳು ಸಾಧನೆಗೈಯ್ಯಲು ಸತತ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ಬಹುಮುಖ್ಯ ಎಂದು ನೀಲಗುಂದ ಗುಡ್ಡದ ವೀರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಬಳಿಯ ಸಮಸ್ತರು ಜಾಗೃತ ವೇದಿಕೆಯಲ್ಲಿ ಈಚೆಗೆ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ 6ನೇ ರಾಂಕ್ ಪಡೆದ ಕಣಿವಿಹಳ್ಳಿಯ ಕೆ.ಸಿ. ಸಾಗರ್ ಹಾಗೂ ಬಯಲಾಟ ಅಕಾಡೆಮೆಯ ಸದಸ್ಯರಾಗಿ ಆಯ್ಕೆಯಾದ ಬಿ. ಪರುಶುರಾಮ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಎಂಬುದು ಪ್ರಮುಖ ಕಾಲಘಟ್ಟವಾಗಿದೆ. ಈ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದರೆ ಮುಂದಿನ ಗುರಿ ತಲುಪಲು ಸೇತುವೆ ಆಗಲಿದೆ ಎಂದರು.
ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗದೆ ಧನಾತ್ಮಕವಾಗಿ ಮುನ್ನಡೆದು ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ವಿಷಯ ಆಯ್ಕೆ ಮಾಡಿ ದೃಢ ವಿಶ್ವಾಸ ಮತ್ತು ನಂಬಿಕೆಯಿಂದ ಅಭ್ಯಾಸ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಖಚಿತ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ. ರಾಜಶೇಖರ್, ವೇದಿಕೆಯ ಅಧ್ಯಕ್ಷ ಪರುಶುರಾಮಪ್ಪ, ಸಂಚಾಲಕ ಪಿ. ಮೇಘರಾಜ, ಪುರಸಭೆ ಸದಸ್ಯರಾದ ಟಿ. ವೆಂಕಟೇಶ್, ಡಿ. ರೊಕ್ಕಪ್ಪ, ಎಪಿಎಂಸಿ ಮಾಜಿ ಸದಸ್ಯ ಚೌಡಪುರ ಷಣ್ಮುಖಪ್ಪ, ಮುಖಂಡರಾದ ವಿಜಯ ದಿವಾಕರ್, ಸಿ. ಪರುಶುರಾಮ, ವಕೀಲ ಟಿ. ವಸಂತರಾಜ್, ಕೆ. ಲಿಂಗಾನಂದ, ಎಚ್. ವಸಂ ತಪ್ಪ, ಸಿ. ಬಸವರಾಜ, ದುಗ್ಗಾವತಿ ಮಂಜುನಾಥ, ಹೇಮಣ್ಣ ಮೋರಗೇರಿ ಮತ್ತು ಇತರರಿದ್ದರು.