ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ

ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ

ಇದೀಗ ನಮ್ಮ ಕಾಲೇಜಿಗೆ ಹೊಸ ಪಠ್ಯಕ್ರಮ ನವೀಕರಿಸಲು ಅಥವಾ ಇರುವ ಪಠ್ಯಕ್ರಮವನ್ನು ಉದ್ಯಮದ ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸುವ ಅವಕಾಶ ಸಿಕ್ಕಂತಾಗಿದೆ. ಜೊತೆಗೆ ಪರೀಕ್ಷಾ ಸುಧಾರಣೆ, ನವೀನ ಬೋಧನಾ ವಿಧಾನ, ಸಂಶೋಧನೆ, ಗುಣಮಟ್ಟ ವರ್ಧನೆಗೆ ಅನುಕೂಲವಾಗಲಿದೆ.

-ಡಾ. ಹೆಚ್.ಬಿ. ಅರವಿಂದ್, ಪ್ರಾಂಶುಪಾಲರು, ಬಿಐಇಟಿ


ದಾವಣಗೆರೆ, ಮೇ 17- ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯವು 2024-25ನೇ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಯುಜಿಸಿ ಅನುಮೋದನೆ ನೀಡಿದೆ ಎಂದು ಪ್ರಾಂಶು ಪಾಲ ಡಾ. ಹೆಚ್.ಬಿ. ಅರವಿಂದ್ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಐಇಟಿ  ಕಳೆದ 26 ವರ್ಷಗಳಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿ 2023ರ ಮಾ.3ರಂದು ವಿಟಿಯುಗೆ ಅರ್ಜಿ ಸಲ್ಲಿಸಲಾಗಿತ್ತು. 

ಈ ಹಿನ್ನೆಲೆಯಲ್ಲಿ ವಿಟಿಯು ತಜ್ಞರ ತಂಡ ಕಳೆದ ಮೇ ತಿಂಗಳಿನಲ್ಲಿ ಕಾಲೇಜಿಗೆ ಭೇಟಿ ನೀಡಿ, ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ವಿಟಿಯು ಅರ್ಜಿಯನ್ನು ಯುಜಿಸಿಗೆ ರವಾನಿಸಿತ್ತು. ಇದರ ಆಧಾರದಲ್ಲಿ  2024ರ ಜನವರಿ 20ರಂದು ಯುಜಿಸಿ ಸಂಸ್ಥೆ ನಮ್ಮ ಕಾಲೇಜಿಗೆ ಹತ್ತು ವರ್ಷಗಳ ಕಾಲ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥೆ ಡಾ. ನಿರ್ಮಲ ಮಾತನಾಡಿ, ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶೇ.60ರಷ್ಟು ವಿದ್ಯಾರ್ಥಿಗಳಿಗೆ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ದೊರತಿದೆ. 

ಕಾಲೇಜಿನ ಎಲ್ಲಾ ಹತ್ತು ವಿಭಾಗಗಳ 450 ವಿದ್ಯಾರ್ಥಿಗಳ ಪೈಕಿ 355ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಬರುವ ಜುಲೈನಲ್ಲಿ ಮತ್ತೆ ಉದ್ಯೋಗ ಮೇಳ ನಡೆಸಲುದ್ದೇಶಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪಿಆರ್‌ಒ ಪ್ರೊ. ಜಿ.ಪಿ. ದೇಸಾಯಿ, ಕಲ್ಲೇಶಪ್ಪ ಉಪಸ್ಥಿತರಿದ್ದರು.

error: Content is protected !!