ಹರಪನಹಳ್ಳಿ : ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ವಕೀಲ ಬಿ.ಕೃಷ್ಣಮೂರ್ತಿ
ಹರಪನಹಳ್ಳಿ, ಮೇ 17- ಯಾವುದೇ ಸೇವೆ ಜನಪ್ರಿಯವಾಗಿದ್ದರೆ ಮಾತ್ರವೇ ಸದಾ ಜನರ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಬಿ.ಕೃಷ್ಣಮೂರ್ತಿ ಅಭಿಪ್ರಾಯಿಸಿದರು.
ವರ್ಗಾವಣೆಯಾಗಿರುವ ನ್ಯಾಯಾಧೀಶರಾದ ಎಂ.ಭಾರತಿ ಮತ್ತು ಫಕ್ಕೀರವ್ವ ಕೆಳಗೇರಿ ಅವರುಗಳಿಗೆ ಇಲ್ಲಿನ ತಾಲ್ಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಭಯ ನ್ಯಾಯಾಲಯದ ನ್ಯಾಯಾಧೀಶರು ಮೂರು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿ ಜನಪ್ರಿಯ ನ್ಯಾಯಾಧೀಶರಾಗಿದ್ದರು. ಹೀಗಾಗಿ ಅವರ ನೆನಪು ಎಲ್ಲರಲ್ಲಿಯೂ ಸದಾ ಉಳಿಯುತ್ತದೆ. ಆದರೆ, ಅಂತಹವರು ತಾಲ್ಲೂಕಿನಿಂದ ದೂರವಾಗುತ್ತಿರುವುದು ದುಃಖದ ವಿಚಾರ ಎನಿಸಿದರೂ ಸಹ ಅವರು ಉನ್ನತ ಹುದ್ದೆ ಅಲಂಕರಿಸಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಅವರು, ಯಾವ ಊರಿಗೆ ಹೋದರೂ ಅದನ್ನು ನಮ್ಮ ಊರು, ನಮ್ಮ ಜನ ಎಂದು ಭಾವಿಸಿದರೆ ಮಾತ್ರವೇ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ಹೀಗಾಗಿ ತೆರಳಿದ ಕೂಡಲೇ ಅಲ್ಲಿನವರನ್ನು ನಾವೇ ಅತಿಥಿಗಳಂತೆ ಕಾಣಬೇಕು. ಆಗ ಮಾತ್ರವೇ ಸಂದರ್ಭಕ್ಕೆ ಅನುಸಾರವಾಗಿ ಆಗುವ ವರ್ಗಾವಣೆಗಳು ಬೇಜಾರು ತರುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಮೂರು ವರ್ಷಗಳ ಕಾಲ ಸಲ್ಲಿಸಿರುವ ಸೇವೆಯಲ್ಲಿ ನನಗೆ ಎಲ್ಲಾ ವಕೀಲರುಗಳು ಸಾಕಷ್ಟು ಸಲಹೆ, ಸಹಕಾರ ನೀಡಿದ್ದಾರೆ. ಎಲ್ಲಾ ಹಿರಿಯ ವಕೀಲರಿಗೆ ನಾನು ಆಭಾರಿಯಾಗಿರುತ್ತೇನೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ ಭಾರತಿ ಮಾತನಾಡಿ, ವಕೀಲರುಗಳು ಮೊಬೈಲ್ ಪ್ರೇಮಿಗಳಾಗ ಬಾರದು. ಪುಸ್ತಕದ ಪ್ರೇಮಿಗಳಾಗಬೇಕು. ಸಮಾಜ ದಲ್ಲಿರುವ ಶ್ರೀ ಸಾಮಾನ್ಯನ ಬಗ್ಗೆ ಅರಿವು, ಮಾನವೀಯ ಗುಣಗಳು, ಅನುಕಂಪ, ದಕ್ಷತೆ, ಪ್ರಾಮಾಣಿಕತೆಯ ಸೇವೆ ಇರುವ ವ್ಯಕ್ತಿಗಳು ನ್ಯಾಯಾಧೀಶರ ಸ್ಥಾನಕ್ಕೆ ಅರ್ಹರು ಹಾಗೂ ಸಮರ್ಥರಾಗಿರುತ್ತಾರೆ ಎಂದು ಹೇಳಿದರು.
ನನ್ನ ಮೂರು ವರ್ಷಗಳ ಅವಧಿಯಲ್ಲಿ ನೂತನ ನ್ಯಾಯಾಲಯದ ಕಟ್ಟಡಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಪಿ. ಜಗದೀಶ್ ಗೌಡ್ರು, ಮತ್ತಿಹಳ್ಳಿ ಅಜ್ಜಪ್ಪ, ಕೆ.ಚಂದ್ರಗೌಡ್ರು, ವಿ.ಜಿ.ಪ್ರಕಾಶ್ ಗೌಡ, ಕೆ.ಎಂ.ಚಂದ್ರಮೌಳಿ, ಕೆ.ಬಸವರಾಜ, ರಾಮ್ ಭಟ್, ಎಂ.ಮೃತ್ಯುಂಜಯ, ಬಿ. ಗೋಣಿಬಸಪ್ಪ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ ಮತ್ತು ನಿರ್ಮಲ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಆರುಂಡಿ ನಾಗರಾಜ್, ಎಸ್.ಎಂ.ರುದ್ರಮುನಿ, ಕೊಟ್ರೇಶ್, ಸುರೇಶ್ ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.