ವಚನ ಸಾಹಿತ್ಯ ಜೀವನ ಮೌಲ್ಯಗಳ ಭಂಡಾರ

ವಚನ ಸಾಹಿತ್ಯ ಜೀವನ ಮೌಲ್ಯಗಳ ಭಂಡಾರ

ಶಿವಗೋಷ್ಠಿಯಲ್ಲಿ ಹೆಚ್.ಕೆ. ಲಿಂಗರಾಜ್‌

ದಾವಣಗೆರೆ, ಮೇ 16- 12ನೇಯ ಶತಮಾನದ ವಚನ ಸಾಹಿತ್ಯ ಜೀವನ ಮೌಲ್ಯಗಳ ಭಂಡಾರವಾಗಿದೆ. ವಚನಕಾರರು ಸಾರಿದ ಕಾಯಕ ಮತ್ತು ದಾಸೋಹ ನಮ್ಮ ನೆಲದ ಸರ್ವ ಶ್ರೇಷ್ಠ ಜೀವನ ಮೌಲ್ಯವಾಗಿದೆ ಎಂದು ಎಚ್.ಕೆ ಲಿಂಗರಾಜ್‌ ಅಭಿಪ್ರಾಯ ಪಟ್ಟರು.

ಅನುಭವ ಮಂಟಪದಲ್ಲಿ ಚರ್ಚೆಯಾದ ಜೀವನ ಮೌಲ್ಯಗಳನ್ನು, ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸ ಲಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ 84 ಮೌಲ್ಯಗಳನ್ನು ಅಳವಡಿಸಲಾಗಿದ್ದು, ಸ್ವಾವಲಂಬಿಯಾಗಿ ಬದುಕಲು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ  ಇವು ಪೂರಕವಾಗಿವೆ. ನಿತ್ಯ ಜೀವನದ ಜಡತ್ವದಿಂದ ಹೊರಬರಲು ಶಿವಗೋಷ್ಠಿ ಪ್ರೇರಕವಾಗಲಿ ಎಂದು ಲಿಂಗರಾಜ ಆಶಯ ವ್ಯಕ್ತಪಡಿಸಿದರು.

ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾ ಮಂಟಪದ ಆವರಣದಲ್ಲಿ ಶಿವಗೋಷ್ಠಿ ಸಮಿತಿ ಮತ್ತು ಸಾದರ ನೌಕರರ ಬಳಗಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 305ನೇಯ ಶಿವಗೋಷ್ಠಿ ಮತ್ತು 79ನೇಯ ಸ್ಮರಣೆ ಕಾರ್ಯಕ್ರಮದಲ್ಲಿ `ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ನಾಗನಗೌಡ ಮರಿಗೌಡರು ಲಿಂಗೈಕ್ಯ ಪ್ರೊ. ಇಂದುಮತಿ ಪಾಟೀಲ್ ಅವರ ಸ್ಮರಣೆ ಮಾಡಿದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ ಗೌಡರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಾಸೋಹಿ ಪ್ರೊ. ಶಂಕರ ಜಿ. ಅಕ್ಕಿಹಾಳ, ನೌಕರರ ಬಳಗದ ಅಧ್ಯಕ್ಷ ನಾಗಪ್ಪ ಕ್ಯಾರಕಟ್ಟೆ, ನಾಗರಾಜ ಸಿರಿಗೆರೆ ಮುಂತಾದವರು ಉಪಸ್ಥಿತರಿದ್ದರು.

ಎಲೆಬೇತೂರು ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎಂ.ಬಿ. ಪ್ರೇಮ ಸ್ವಾಗತಿಸಿದರು. ಶಿಕ್ಷಕಿ ಅನಿತಾ ವಂದನೆ ಸಲ್ಲಿಸಿದರು. ಡಾ. ಷಣ್ಮುಖಪ್ಪ ಕಾರ್ಯಕ್ರಮ ನಿರೂಪಿಸಿದರು.

error: Content is protected !!