ಬೆಳೆ ವಿಮೆ ಪರಿಹಾರ ವಿಳಂಬಕ್ಕೆ ರೈತರ ಆಕ್ರೋಶ

ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಜಗಳೂರು ತಾಲ್ಲೂಕು ರೈತರ ಪ್ರತಿಭಟನೆ

ದಾವಣಗೆರೆ, ಮೇ 13- ಬೆಳೆ ವಿಮೆ ಪರಿಹಾರ ವಿಳಂಬ ನೀತಿ ಖಂಡಿಸಿ, ಶೀಘ್ರ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ  ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಮಧ್ಯಾಹ್ನ ಏಕಾ ಏಕಿ ಕೃಷಿ ಇಲಾಖೆ ಆವರಣಕ್ಕೆ ಆಗಮಿಸಿದ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ನೂರಾರು ರೈತರು `ಬೇಕೇ ಬೇಕು, ವಿಮೆ ಹಣ ಬೇಕು’ ಎಂದು ಘೋಷಣೆ ಕೂಗಿದರು. ಕೂಲಿ ಮಾಡಿ ಬೆಳೆ ವಿಮಾ ಕಂತು ಕಟ್ಟಿದ್ದೇವೆ. ನಮಗೆ ಹಣ ಕೊಡಿಸಿ ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.

ಜಗಳೂರು ತಾಲ್ಲೂಕಿನ ಅಸಗೋಡು, ದಿದ್ದಿಗೆ, ಗುರುಸಿದ್ದಾಪುರ, ಸೊಕ್ಕೆ, ಗುತ್ತಿದುರ್ಗ, ದೇವಿಕೆರೆ, ಬಿಳಿಚೋಡು, ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಹಣ ಬಂದಿಲ್ಲ ಎಂದು ರೈತರು ಅಸಮಾಧಾನ ಹೊರ ಹಾಕಿದರು. ನಮಗೆ ಯಾವಾಗ ಹಣ ಕೊಡುತ್ತೀರಿ? ಎಂದು ಜಂಟಿ ಕೃಷಿ ನಿರ್ದೇಶಕರನ್ನು ಪ್ರಶ್ನಿಸಿದ ರೈತರು, ನಿಮ್ಮಿಂದ ಪರಿಹಾರ ನೀಡಲಾಗದಿದ್ದರೆ, ಹಾಗೆಂದು ಬರೆದು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅಸಗೋಡು ಕೆ.ಬಿ. ರವಿ, ಸಾಕಷ್ಟು ರೈತರ ಬೆಳೆ ನಷ್ಟವಾಗಿದೆ. ಜಿಲ್ಲಾಧಿಕಾರಿಗಳು, ಶಾಸಕರು, ಸಚಿವರು ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿ.ಎಸ್. ದೇವರಾಜ ಅಸಗೋಡು ಮಾತನಾಡಿ, 6 ಎಕರೆ ಮೆಕ್ಕೆಜೋಳ ನಷ್ಟವಾಗಿದೆ. 1.50 ಲಕ್ಷ ರೂ. ಖರ್ಚು ಮಾಡಿದ್ದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಈ ವೇಳೆ ವಿಮಾ ಪರಿಹಾರ ಬಂದರೆ ಸಹಕಾರಿಯಾಗುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ರೈತರ ಮನವೊಲಿಕೆಗೆ ಯತ್ನಿಸಿದರು. ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆಯಾಗಿದೆ. ನಾಳೆ ಸಭೆ ನಡೆಸಿ ನಡಾವಳಿಯನ್ನು ಮೇಲಾಧಿಕಾರಿಗಳಿಗೆ ಕಳಿಸಿಕೊಡುತ್ತೇವೆ ಎಂಬ ಅವರ ಉತ್ತರ ರೈತರಿಗೆ ಸಮಾಧಾನ ತರಲಿಲ್ಲ.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ ಹಾಗೂ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ನಾಳೆ ಜಿಲ್ಲಾಡಳಿತ ಭವನದಲ್ಲಿ ವಿಮಾ ಪರಿಹಾರ ವಿಳಂಬದ ಬಗ್ಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದಾಗ ರೈತರು ವಾಪಾಸ್ ತೆರಳಿದರು.

error: Content is protected !!