ದಾವಣಗೆರೆ ನಗರಸಭೆಯಲ್ಲಿ ಸುದೀರ್ಘ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ತಿಪ್ಪೇಸ್ವಾಮಿ ಅವರು ನೌಕರರ ಸಂಘಟನೆ ಮೂಲಕ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡಿದ್ದರು.
ಜೊತೆಗೆ, ಅತ್ಯಂತ ಹಿಂದುಳಿದ ಕುರುಹಿನಶೆಟ್ಟಿ ಸಮಾಜದ ಏಳಿಗೆಗೆ ಅಪಾರವಾಗಿ ಶ್ರಮಿಸಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತಿಪ್ಪೇಸ್ವಾಮಿ, 2024, ಮೇ 1ರ ಕಾರ್ಮಿಕ ದಿನಾಚರಣೆಯಂದೇ ನಿಧನರಾದರು.
ನಗರಸಭೆಯಲ್ಲಿ ದಿನಗೂಲಿಯಾಗಿ ಸೇವೆ ಸಲ್ಲಿಸುತ್ತಿದ್ದ ತಿಪ್ಪೇಸ್ವಾಮಿ ಅವರು, ಸುದೀರ್ಘ ಹೋರಾಟದ ಫಲವಾಗಿ ಖಾಯಂ ನೌಕರರಾಗಿ 1994ರಲ್ಲಿ ಸಕ್ರಮಗೊಂಡು, 21 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಸಿಬ್ಬಂದಿ ಸಹಾಯಕರಾಗಿ ಸೇವೆ ಸಲ್ಲಿಸಿ, 2015ರಲ್ಲಿ ವಯೋನಿವೃತ್ತಿ ಹೊಂದಿದ್ದರು. ಎಲ್ಲಾ ನೌಕರರ ಅಚ್ಚುಮೆಚ್ಚಿನ ಗುಮಾಸ್ತರಾಗಿದ್ದರು. ನಿವೃತ್ತ ನೌಕರರ ಸಂಘಟನೆಯ ಖಜಾಂಚಿಯಾಗಿದ್ದ ಅವರು, ನಿವೃತ್ತ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌವಲತ್ತುಗಳನ್ನು ಕೊಡಿಸುವ ಪ್ರಯತ್ನದಲ್ಲಿದ್ದರು. ಎಂ.ಸಿ.ಸಿ `ಬಿ’ ಬ್ಲಾಕ್ನಲ್ಲಿರುವ ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿ ನಿಲಯ ಮತ್ತು ಕೆ.ಟಿ.ಜೆ ನಗರ 14ನೇ ಕ್ರಾಸ್ನಲ್ಲಿರುವ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುತ್ತಾ 50 ವರ್ಷಗಳಿಂದ ನಿರಂತರವಾಗಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಕುರುಹಿನಶೆಟ್ಟಿ ಸಮಾಜದ ಬಂಧುಗಳ ಸಹಕಾರದಿಂದ ಸಮುದಾಯ ಭವನವನ್ನು ನಿರ್ಮಿಸುವಲ್ಲೂ ಅವರು ಶ್ರಮಿಸಿದ್ದರು.
– ರುದ್ರಮುನೇಶ್ವರ, ದಾವಣಗೆರೆ.