ದಾವಣಗೆರೆ, ಮೇ 12- ಛಲವಾದಿ ಮಹಾಸಭಾ ವತಿ ಯಿಂದ ಭಾನುವಾರ ನಗರದ ಭಗೀರಥ ವೃತ್ತದಲ್ಲಿರುವ ಹೆಚ್.ಬಿ. ಇಂದಿರಮ್ಮ ರಾಮಯ್ಯ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಛಲವಾದಿ ವಧು-ವರರ ಸಮಾವೇಶ’ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಸಮಾಜ ಬಾಂಧವರು ಆಗಮಿಸಿದ್ದರು. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆದ ಈ ಸಮಾವೇಶದಲ್ಲಿ 103 ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ 52 ಜೋಡಿಗಳು ವಿವಾಹಕ್ಕೆ ಸಮ್ಮತಿ ಸೂಚಿಸಿದವು.
ಸಮಾವೇಶ ಉದ್ಘಾಟನೆ ವೇಳೆ ಮಾತನಾಡಿದ ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ರುದ್ರಮುನಿ, ಸಮಾಜದಲ್ಲಿ ಕಡು ಬಡವರಿದ್ದಾರೆ. ವಧು-ವರರನ್ನು ಹುಡುಕಲು ಮಧ್ಯವರ್ತಿಗಳಿಗೆ ಹಣ ನೀಡಲು ಅವರಿಗೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಸಮಾವೇಶಗಳು ಉಪಯುಕ್ತವಾಗಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕಲಾಗುತ್ತದೆ. ಈ ರೀತಿ ಮಾಡದೆ, ಕೃಷಿಕ ಮಕ್ಕಳಿಗೆ ಹೆಣ್ಣು ಕೊಟ್ಟು ಸಂಬಂಧ ಬೆಳೆಸುವಂತೆ ಕರೆ ನೀಡಿದರು. ಈ ಸಮಾವೇಶ ಸಮಾಜದವರು ಒಂದೆಡೆ ಬೆರೆತು ಸಂಘಟಿತರಾಗಲೂ ಸಹಕಾರಿಯಾಗುತ್ತದೆ ಎಂದರು.
ಸಮಾಜದ ಮುಖಂಡರುಗಳಾದ ನಿವೃತ್ತ ಇಂಜಿನಿಯರ್ ಜಯಪ್ರಕಾಶ್, ನಿವೃತ್ತ ಕಮೀಷನರ್ ಬಿ.ಹೆಚ್. ಶೇಖರಪ್ಪ, ಛಲವಾದಿ ಮಹಾಸಭಾ ಮುಖಂಡ ಹೆಚ್.ಕೆ. ಬಸವರಾಜ್, ನಿವೃತ್ತ ಡಿಹೆಚ್‌ಒ ಡಾ.ಜಗನ್ನಾಥ್, ರಾಮಯ್ಯ, ಸಮಾವೇಶದ ಸಂಚಾಲಕ ಎಲ್. ಪಂಚಾಕ್ಷರಯ್ಯ ಇತರರು ಈ ಸಂದರ್ಭದಲ್ಲಿದ್ದರು.