ಕೆ.ಎನ್.ಹಳ್ಳಿ : ಗಮನ ಸೆಳೆಯುವ ಬಸ್ ತಂಗುದಾಣ

ಕೆ.ಎನ್.ಹಳ್ಳಿ : ಗಮನ ಸೆಳೆಯುವ ಬಸ್ ತಂಗುದಾಣ

ಮಲೇಬೆನ್ನೂರು, ಮೇ 12- ಅನೈತಿಕ ತಾಣವಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಸೈನಿಕರೊಬ್ಬರು ಆಸಕ್ತಿ ವಹಿಸಿ, ಮದುವಣಗಿತ್ತಿಯಂತೆ ಸಿಂಗಾರಗೊಳಿಸಿ, ಎಲ್ಲರ ಗಮನ ಸೆಳೆಯುವಂತೆ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ  ಮಾಡಿದ್ದಾರೆ.

ದೇಶ ರಕ್ಷಣೆ ನನ್ನ ಕರ್ತವ್ಯ, ಸಮಾಜ ಸೇವೆಯೇ ನನ್ನ ಮೂಲ ಮಂತ್ರ ಎನ್ನುವ ಗ್ರಾಮದ ಡಾ. ವೈ.ನಾಗಪ್ಪ ಬಡಾವಣೆಯ ವಾಸಿ ಹಾಗೂ ಸೈನಿಕ ಶಾಂತಕುಮಾರ್ ಎಂಬುವವರು ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ವೇಳೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಸ್ ತಂಗುದಾಣವನ್ನು ನೋಡುತ್ತಾರೆ. ಕೂಡಲು ಯೋಗ್ಯವಲ್ಲದ ಈ ತಂಗುದಾಣವನ್ನು ಆಕರ್ಷಕವಾಗಿ ಮಾಡುವ ಇಚ್ಛೆಯನ್ನು ಕೆಲ ಯುವಕರಲ್ಲಿ ಹಂಚಿಕೊಳ್ಳುತ್ತಾರೆ.

ನಂತರ ಬಡಾವಣೆಯಲ್ಲೇ ವಾಸವಿರುವ ಚಿತ್ರ ಕಲಾವಿದ ಪಿ.ಟಿ.ಬಸವರಾಜ್ ಅವರ ಮನವೊಲಿಸಿ ಇದಕ್ಕೊಂದು ಆಕಾರ ಕೊಡುತ್ತಾರೆ.

ಒಂದು ಗೋಡೆಗೆ ದೇಶದ ಬೆನ್ನೆಲುಬಾದ ನೇಗಿಲು ಹೊತ್ತ ರೈತ ಮತ್ತು ಹೊಲ, ಗದ್ದೆಗಳ ಚಿತ್ರ, ಇನ್ನೊಂದು ಗೋಡೆಗೆ ರಾಷ್ಟ್ರ ಧ್ವಜ ಮತ್ತು ಬಂದೂಕು ಹಿಡಿದ ಸೈನಿಕರ ಚಿತ್ರ, ಇನ್ನೊಂದು ಗೋಡೆಗೆ ಕ್ರೀಡೆಗೆ ಸಂಬಂಧಿಸಿದ ಚಿತ್ರ. ಈ ರೀತಿ ತಂಗುದಾಣದ ಗೋಡೆಗಳನ್ನು ಚಿತ್ರಿಸಿದ್ದಾರೆ. ತಂಗುದಾಣದ ಒಳಗಡೆ ಹೋಗುವ ಮೊದಲು ಎಡಗಡೆ ಇಲ್ಲಿ ಯಾರೂ ಪೋಸ್ಟರ್ ಹಚ್ಚುವಂತಿಲ್ಲ ಮತ್ತು ಗಲೀಜು ಮಾಡಬಾರದು ಎಂದು ಬರೆಯಲಾಗಿದೆ. ಬಲಗಡೆ ಮದ್ಯ ನಿಷೇಧದ ಚಿತ್ರ ಬಿಡಿಸಲಾಗಿದೆ. ಕಂಬಗಳಿಗೆ ಅತ್ಯಾಕರ್ಷಕ ಪೇಂಟಿಂಗ್ ಮಾಡಲಾಗಿದ್ದು, ಬಸ್ ತಂಗುದಾಣ ಈಗ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಮಾದರಿಯಾಗಿದೆ.

error: Content is protected !!