ಹೊನ್ನಾಳಿ, ಮೇ 8 – ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅತೀ ಹೆಚ್ಚಿನ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಅರಕೆರೆ ಮಧುಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಅರಕೆರೆ ಗ್ರಾಮದ 13 ಮತ್ತು 14 ಮತಗಟ್ಟೆ ಕೇಂದ್ರಗಳಲ್ಲಿ ಗ್ರಾಮದ ಮುಖಂಡರೊಂದಿಗೆ ಮತ ಚಲಾಯಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ-ಮತ-ಭೇದ ಎಣಿಸದೇ ರಾಜ್ಯದ ಎಲ್ಲಾ ವರ್ಗಗಳ ಬಡವರು ಸದುಪಯೋಗಪಡಿಸಿಕೊಂಡಿದ್ದಾರೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಪಕ್ಷದ ಯೋಜನೆಗಳು ಸಮರ್ಪಕವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು, ಯುವಕರು ಅತೀ ಹೆಚ್ಚಾಗಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದರಾದರೆ, ದಾವಣಗೆರೆ ಜಿಲ್ಲಾದ್ಯಂತ ಅಭಿವೃದ್ಧಿ ಪರ್ವ ಪ್ರಾರಂಭವಾಗಿ, ಹಿಂದಿನ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲಾ ಯೋಜನೆಗಳಿಗೂ ಚಾಲನೆ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಬೆನಕಪ್ಪಗೌಡ, ಡಿ.ಲೋಹಿತ್, ಎಂ. ಬಸವರಾಜಪ್ಪ, ಮಲ್ಲಿಕಾರ್ಜುನ್ ಗೌಡ, ಪರಮೇಶಪ್ಪ, ರವಿಕುಮಾರ್, ನಾಗರಾಜ್, ಹಾಲೇಶ್, ಮಂಜುನಾಥ್, ಕೆ.ಎನ್.ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.