ದಾವಣಗೆರೆ, ಮೇ 8- ಗೌಪ್ಯ ಮತದಾನ ಉಲ್ಲಂಘಿಸಿದ ಆರೋಪದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗನೂರು ಬಸಪ್ಪ ಮತಗಟ್ಟೆಯಲ್ಲಿ ಸಂಸದ ಸಿದ್ದೇಶ್ವರ ಅವರು ಮತದಾನ ಮಾಡಿದ ಬಳಿಕ ಹೊರಗೆ ಬರದೆ, ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಮತ ಹಾಕುವ ವೇಳೆ ಇವಿಎಂ ಬಳಿ ಇದ್ದು ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಪಾಲಿಕೆ ಆಯುಕ್ತರಾದ ರೇಣುಕಾ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಂಸದರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸಿದ್ದೇಶ್ವರ ಅವರು 4 ಬಾರಿ ಸಂಸದರಾದ್ರೂ ಜಿಲ್ಲೆಗೆ ಶೂನ್ಯ ಸಾಧನೆ ಮಾಡಿರುವುದಲ್ಲದೇ, ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸಿದ ಹಿರಿಯರಾದ ಎಸ್.ಎ ರವೀಂದ್ರನಾಥ್ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಪಾಲಿಕೆ ಹಿರಿಯ ಸದಸ್ಯ ಗಡಿಗುಡಾಳ್ ಮಂಜುನಾಥ್, ಜಿಲ್ಲಾ ಕಾಂಗ್ರೆಸ್
ಇಂಟಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಾಂಗ್ರೆಸ್ ಮುಖಂಡ ಎಂ.ಕೆ. ಲಿಯಾಖತ್ ಅಲಿ, ಬಿ.ಎಚ್. ಉದಯ ಕುಮಾರ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಮುಬಾರಕ್ ಸುದ್ದಿಗೋಷ್ಠಿಯಲ್ಲಿದ್ದರು.