ದಾವಣಗೆರೆ, ಮೇ 2 – ಕುಂದುವಾಡ ಕೆರೆ ಅಭಿವೃದ್ಧಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ 16 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಹೆಚ್.ಸಿ. ಜಯಮ್ಮ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಡುವಾಡ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಲೂಟಿ ಹೊಡೆದಿರುವುದು ಶಾಮನೂರು ಕುಟುಂಬದವರೇ ಹೊರತು ಸಂಸದ ಜಿ.ಎಂ. ಸಿದ್ದೇಶ್ವರ ಅಲ್ಲ ಎಂದಿದ್ದಾರೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್ ಅವರು ಸಿದ್ದೇಶ್ವರ ವಿರುದ್ಧ ಮಾಡಿದ ಆರೋಪ ತಳ್ಳಿ ಹಾಕಿರುವ ಜಯಮ್ಮ, ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮೊದಲ ಬಾರಿ ಸಚಿವರಾಗಿದ್ದಾಗ ಕುಂದುವಾಡ ಕೆರೆ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ ಬಳಸಿದ್ದಾರೆ.
ಆದರೆ, ಆಗ ಕೂಲಿಗಾಗಿ ಕಾಳು ಯೋಜನೆಯಡಿ ರೈತರೇ ಸ್ವಯಂ ಪ್ರೇರಿತವಾಗಿ ಹೂಳು ತೆಗೆದುಕೊಂಡು ಹೋಗಿದ್ದಾರೆ. ಕೆರೆ ಅಭಿವೃದ್ಧಿಗೆ ನಯಾ ಪೈಸೆ ಬಳಸಿಲ್ಲ ಎಂದು ಪ್ರತ್ಯಾರೋಪ ಮಾಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ 16 ಕೋಟಿ ರೂ. ಅನುದಾನ ತೆಗೆದು ಪಾರದರ್ಶಕವಾಗಿ ಟೆಂಡರ್ ಕೆರೆದು ಕುಂದುವಾಡ ಕೆರೆ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಅನಿತಾಬಾಯಿ ಪತಿ ಮಾಲತೇಶ ರಾವ್ ದೂಡಾ ಅಧ್ಯಕ್ಷರಾಗಿದ್ದಾಗ ಎಷ್ಟು ಬೇನಾಮಿ ಸೈಟು ಮಾಡಿದ್ದಾರೆ? ನಿಜಲಿಂಗಪ್ಪ ಬಡಾವಣೆ ಮೂಲೆ ನಿವೇಶನಗಳನ್ನು ಬಿಡಿ ನಿವೇಶನಗಳಾಗಿ ಪರಿವರ್ತಿಸಿ ಎಷ್ಟು ಸೈಟುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ? ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಭಾಗ್ಯ ಪಿಸಾಳೆ, ಪುಷ್ಪ ವಾಲಿ, ಶಶಿಕಲಾ, ಶ್ಯಾಮಲ, ಚೇತನಾ ಶಿವಕುಮಾರ್, ವೀಣಾ, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.