ಹರಿಹರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಮನವಿ
ಹರಿಹರ, ಮೇ 2- ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ, ನಿಮ್ಮ ಮನೆ ಮಗನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.
ಹರಿಹರ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಗಾಂಧಿ ವೃತ್ತದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಒಂದೆಡೆಯಾದರೆ ದಾವಣಗೆರೆ ಕ್ಷೇತ್ರದ ಚುನಾವಣೆ ಕಣವೇ ಬೇರೆ. ಇಲ್ಲಿ ಜನಸಾಮಾನ್ಯರಿಗೆ ಅವ ಕಾಶ ಗಳಿಲ್ಲ, ಸ್ವಾತಂತ್ರ್ಯವಿಲ್ಲ. ಪಾಳೇಗಾರಿಕೆ ಸಂಸ್ಕೃತಿ, ದೌರ್ಜನ್ಯ, ದಬ್ಬಾಳಿಕೆ ಜೊತೆಗೆ ಎಲ್ಲಾ ಅಧಿಕಾರದ ಸ್ಥಾನಗಳಲ್ಲಿ ನಾವೇ ಇರ ಬೇಕೆಂಬ ಸಂಕುಚಿತ ಭಾವನೆ ಇದೆ. ಸಾಮಾನ್ಯ ಜನರು ಕೇವಲ ಕೇವಲ ಮತ ಹಾಕಲು ಅಷ್ಟೇ ಇರುವುದು ಎಂಬ ಮನೋಭಾವನೆ ಹೊಂದಿರುವವರಿಗೆ ತಕ್ಕ ಪಾಠ ಕಲಿಸಿ. ನಾನು ಗೆಲ್ಲಲಿ, ಸೋಲಲಿ. ನಾನೆಲ್ಲೂ ಹೋಗಲ್ಲ. ನಿಮ್ಮ ಸೇವೆಗೆ ಸದಾ ಬದ್ಧನಿರುತ್ತೇನೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿಕಾರ ಬೇಕಿರುವುದು ಜನಸೇವೆಗಲ್ಲ, ಸ್ವ ಪ್ರತಿಷ್ಠೆ, ಸ್ವ ಅಭಿವೃದ್ಧಿ, ಸ್ವ ಆಸ್ತಿಗಳ ಉಳಿಸಿಕೊಳ್ಳುವ ನೆಪ ಮಾತ್ರ ಕಾಣಿಸುತ್ತಿದೆ ಎಂದು ಕಿಡಿಕಾರಿದರು.
ನ್ಯೂಯಾರ್ಕ್ನಿಂದ ಬಂದಿದ್ದ ಇನ್ಸೈಟ್ ಮೆಂಟರ್ ಡಾ. ಶ್ರೀನಾಥ್ ಅರಕಲಗೋಡು, ಪುರಂದರ ಲೋಕಿಕೆರೆ, ವಿನಯ್ ಅವರ ಚಿಕ್ಕಪ್ಪ ರಮೇಶ್ ಚಿಕ್ಕಬೂದಾಳ್, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ. ವೆಂಕಟೇಶ್ ಮೂರ್ತಿ, ನಿವೃತ್ತ ಕೆಎಎಸ್ ಅಧಿಕಾರಿಗಳಾದ ಕೊತ್ತಂಬರಿ ಸಿದ್ದಪ್ಪ ಭಾನುವಳ್ಳಿ, ಕೆ. ರೇವಣಪ್ಪ ಕಮಲಪುರ ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರಿನ ಡಾ. ಮಹಾದೇವಗೌಡ ಅವರ ತಂಡ ಮತ್ತು ಇತರರು ರಾಲಿಯಲ್ಲಿ ಪಾಲ್ಗೊಂಡಿದ್ದರು.