ಅಂಬೇಡ್ಕರ್ ಕೊಟ್ಟ ಎಸ್ಸಿ- ಎಸ್ಟಿ ಮೀಸಲಾತಿ ತೆಗೆಯಲು ಪ್ರಯತ್ನಿಸಿದರೆ ಕೈಗೆ ಬೆಂಕಿ ಹತ್ತುತ್ತೆ.
– ಜಿ. ಪರಮೇಶ್ವರ್, ಗೃಹ ಸಚಿವ
ದಾವಣಗೆರೆ, ಮೇ 1- ಸಂವಿಧಾನ ಬದಲಿಸುವ ಮಾತನ್ನಾಡುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಜತೆಗೆ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ನಗರದ ಛಲವಾದಿ ಸಮುಧಾಯ ಭವನದಲ್ಲಿ ಬುಧವಾರ ನಡೆದ ಛಲವಾದಿ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಶೇ.60ರಿಂದ 70ರಷ್ಟಿರುವ ಶೋಷಿತ ಸಮುದಾಯಗಳು ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು ಎಂದರು.
ಬಿಜೆಪಿಯ ಸಂಸದರು, ಸಚಿವರು ನಾವು ಬಂದಿರೋದೆ ಸಂವಿಧಾನ ಬದಲಿಸೋಕೆ ಎಂಬ ದಿಟ್ಟತನದ ಹೇಳಿಕೆ ಗಮನಿಸಿದರೆ ನಾವು ಜಾಗೃತರಾಗಲೇ ಬೇಕೆಂದರು.
ಛಲವಾದಿ ಸಮಾಜದ ಮುಖಂಡರು, ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳುತ್ತಿರುವುದು ನನಗೆ ಸಂತೋಷ ಎಂದರು.
ನಮ್ಮ ಸಮಾಜದ ಹಿರಿಯ ನಾಯಕ ಕೆ.ಎಚ್ ರಂಗನಾಥ್ ಮತ್ತು ಶಾಮನೂರು ಶಿವಶಂಕರಪ್ಪ ಅವರ ಸಂಬಂಧ ಹಿಂದಿನಿಂದಲೂ ಉತ್ತಮ ವಾಗಿದ್ದು, ಈ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ನಮ್ಮ ಮನೆ ಮಹಿಳೆ ಡಾ. ಪ್ರಭಾ ಅವರನ್ನು ಗೆಲ್ಲಿಸಲೇ ಬೇಕೆಂದು ಮನವಿ ಮಾಡಿದರು.
ಛಲವಾದಿ ಸಮಾಜದ ಇಬ್ಬರು ನಾಯಕರನ್ನು ಕಾಂಗ್ರೆಸ್ ಪಕ್ಷವು ಎಐಸಿಸಿ ಅಧ್ಯಕ್ಷರನ್ನಾಗಿಸಿದೆ. ಇಂತಹ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.
ಎಸ್ಸಿ, ಎಸ್ಟಿಗೆ ಇರುವ ಮೀಸಲಾತಿ ತಗೆದು ಮುಸ್ಲಿಂಮರಿಗೆ ಕೊಡುತ್ತಾರೆ ಎಂದು ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ. ಈ ರೀತಿ ಪಕ್ಷ ನಡೆದುಕೊಂಡರೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದು ಗುಡುಗಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಈ ಸಮಾಜದ ಮುಖಂಡರಿಗೂ, ನಮಗೂ ಅನ್ಯೋನ್ಯ ಸಂಬಂಧ ವಿದೆ ಮತ್ತು ನಮ್ಮ ಕುಟುಂಬದ ಮೇಲೆ ವಿಶ್ವಾಸ ಇಟ್ಟಿದ್ದಿರಿ. ಆದ್ದರಿಂದ ಛಲ ವಾದಿ ಸಮಾಜಕ್ಕೆ ಹೆಚ್ಚಿನ ಅನುಕೂಲ ಮಾಡುವುದಾಗಿ ತಿಳಿಸಿದರು.
ಸಾಮಾಜಿಕ ಕಳಕಳಿ ಹಾಗೂ ಜನರ ಆರೋಗ್ಯದ ಕಾಳಜಿ ಹೊಂದಿರುವ ಡಾ. ಪ್ರಭಾ ಅವರು ಸಂಸತ್‌ನಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಭಾಷಾ ಕೌಶಲ್ಯ ಹೊಂದಿದ್ದಾರೆ ಎಂದರು.
ಛಲವಾದಿ ಸಮಾಜಕ್ಕೆ ಅನುಕೂಲ ಮಾಡುವ ಜತೆಗೆ ಅಪೂರ್ಣವಾದ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ತರುತ್ತೇನೆ ಎಂದ ಅವರು, ಡಾ. ಪ್ರಭಾ ಅವರನ್ನು ಗೆಲ್ಲಿಸಿ ಎಂದರು.
ಸಮಾಜದ ಜಿಲ್ಲಾಧ್ಯಕ್ಷ ರುದ್ರಮುನಿ ಮಾತನಾಡಿ, ಹಿಂದಿನ ಸರ್ಕಾರ ಘೋಷಿಸಿದ ಓನಕೆ ಓಬವ್ವ ಜಯಂತಿಯನ್ನು ದೊಡ್ಡ ಮಟ್ಟದಲ್ಲಿ ಮಾಡುವ ಮೂಲಕ ಸಮಾಜವನ್ನು ಸಂಘಟಿಸಲು ಸಹಕರಿಸಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್, ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಫಿರ್, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಕೆ.ಎಸ್. ಬಸವರಾಜ್, ರಮೇಶ್, ಬಸವರಾಜ್, ಡಾ.ಜಗನ್ನಾಥ್, ನಿರಂಜನ್, ತಿಪ್ಪೇಸ್ವಾಮಿ, ಚಂದ್ರಪ್ಪ ಮತ್ತು ಇತರರು ಇದ್ದರು.