ಜಗಳೂರು, ಮೇ 1- ಮುಕ್ತ ಹಾಗೂ ಶಾಂತಿಯುತವಾಗಿ ಲೋಕಸಭಾ ಚುನಾವಣೆ ನಡೆಸಲು ನಿಯೋಜಿಸಲಾಗಿರುವ ಭದ್ರತಾ ಪಡೆ ಆರ್ ಪಿಎಫ್ ಕಮಾಂಡೋ ಶಸ್ತ್ರಸಜ್ಜಿತವಾಗಿ ಪಟ್ಟಣಕ್ಕೆ ಆಗಮಿಸಿದ್ದು, ಮುಖ್ಯ ರಸ್ತೆಗಳಲ್ಲಿ ಸೌಹಾರ್ದ ನಡಿಗೆಯಲ್ಲಿ ಪಾಲ್ಗೊಂಡಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊಸಬಸ್ ನಿಲ್ದಾಣ, ಭುವನೇಶ್ವರಿ ವೃತ್ತ, ಸರ್ಕಾರಿ ಆಸ್ಪತ್ರೆ ರಸ್ತೆ, ಮಹಾತ್ಮಗಾಂಧಿ ವೃತ್ತದ ಮೂಲಕ ಪೊಲೀಸ್ ಠಾಣೆ ವರೆಗೆ ಲೋಕಸಭಾ ಚುನಾ ವಣೆಯ ಭದ್ರತಾ ಪಡೆ ಪಥಸಂಚಲನ ನಡೆಸಿತು.
ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಭದ್ರತಾಪಡೆಗೆ ಸ್ವಾಗತಿಸಿ ಮಾತನಾಡುತ್ತಾ, ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿಧಾನ ಸಭಾ ಕ್ಷೇತ್ರವ್ಯಾಪ್ತಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಕೇಂದ್ರಗಳನ್ನೊಳಗೊಂಡಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತದಾರರಿಗೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯ ಜೊತೆ 50 ಜನ ಶಸ್ತ್ರ ಸಜ್ಜಿತ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ನ್ಯಾಯಸಮ್ಮತವಾಗಿ, ಶಾಂತಿಯುತ ಚುನಾವಣೆಗೆ ಸಾರ್ವಜನಿಕರು ಸಹಕರಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳು ನಡೆದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ಸಾಗರ್ ಹಾಗೂ ಆರ್ ಪಿಎಫ್ ಕಮಾಂಡೋ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.