ದಾವಣಗೆರೆ, ಏ.29- ಏಷ್ಯ ಖಂಡದ ಎರಡನೇ ದೊಡ್ಡ ಕೆರೆ ಸೂಳೆಕೆರೆಯನ್ನು ಸಂರಕ್ಷಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುವ ಪಕ್ಷ ಅಥವಾ ವ್ಯಕ್ತಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಸೂಳೆಕೆರೆಯ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸುವ ಮೂಲಕ ಕೆರೆಯ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಿಸಬೇಕೆಂದು ಒತ್ತಾಯಿಸಿ, ಖಡ್ಗ ಸಂಘ ಹಾಗೂ ಸೂಳೆಕೆರೆ ಸಂರಕ್ಷಣಾ ಸಂಸ್ಥೆಯಿಂದ ಕಳೆದ ಏಳು ವರ್ಷಗಳಿಂದ ಸತತವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು. ಖಡ್ಗ ಸಂಘದ ಅಧ್ಯಕ್ಷ ಬಿ.ಆರ್. ರಘು ಮಾತನಾಡಿ, `ಜಿಲ್ಲೆಯಲ್ಲಿ ಸೂಳೆಕೆರೆ ವಿಷಯಕ್ಕೆ ಸಂಬಂಧಿಸಿದಂತೆ 2 ಲಕ್ಷಕ್ಕೂ ಹೆಚ್ಚು ಬೆಂಬಲಿಗರನ್ನು ಹೊಂದಿದೆ. ಈ ಕೆರೆಯನ್ನು ಸಂರಕ್ಷಿಸುವುದಾಗಿ ಬಿಜೆಪಿ, ಕಾಂಗ್ರೆಸ್ ಅಥವಾ ಸ್ವತಂತ್ರ್ಯ ಅಭ್ಯರ್ಥಿ ಯಾರೇ ಮುಂದೆಬಂದು ಬಹಿರಂಗವಾಗಿ ಭರವಸೆ ನೀಡಿದರೂ, ಚುನಾವಣೆಯಲ್ಲಿ ನಮ್ಮ ಸಂಘದಿಂದ ಆ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಚಂದ್ರಹಾಸ ಲಿಂಗದಹಳ್ಳಿ, ಕುಬೇಂದ್ರಸ್ವಾಮಿ ಇದ್ದರು.