ಬಿರುಬೇಸಿಗೆಯಲ್ಲಿ ಮಜ್ಜಿಗೆ ದಾನ ಪುಣ್ಯದ ಕೆಲಸ

ಬಿರುಬೇಸಿಗೆಯಲ್ಲಿ ಮಜ್ಜಿಗೆ ದಾನ ಪುಣ್ಯದ ಕೆಲಸ

ದಾವಣಗೆರೆ, ಏ. 28- ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ಅನ್ನದಾನ. ಅನ್ನದಾನದಲ್ಲೇ ಒಂದಾದ ಮಜ್ಜಿಗೆ ದಾನವನ್ನು  ಮಾಡುವುದು ಪುಣ್ಯದ ಕೆಲಸ. ಇಂತಹ ಕೆಲಸವನ್ನು ಕರುಣಾ ಟ್ರಸ್ಟ್‌ನಿಂದ ಸತತ 8 ವರ್ಷಗಳಿಂದ  ಮಾಡುತ್ತಾ ಬಂದಿದೆ ಎಂದು ಪ್ರೊ.  ಬಸವರಾಜ್ ಶ್ಲ್ಯಾಘಿಸಿದರು.

ನಗರದ ಜಯದೇವ ಸರ್ಕಲ್, ಚಿಗಟೇರಿ ಜಿಲ್ಲಾ ಆಸ್ಪತ್ರೆ, ರಾಂ ಅಂಡ್ ಕೋ ಸರ್ಕಲ್ ಹತ್ತಿರ ಸತತವಾಗಿ ಒಂದು ತಿಂಗಳ ಮಜ್ಜಿಗೆ ಮತ್ತು ನೀರಿನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಕ್ತಾಯ ಸಮಾರಂಭದಲ್ಲಿ ಉಪಸ್ಥಿತರಿದ್ದು  ಅವರು  ಮಾತನಾಡಿದರು.

ಉಪಕಾರ ಸ್ಮರಣೆ ಮಾನವ ಸಂಸ್ಕೃತಿಯ ಒಂದು ಲಕ್ಷಣ. ಆದ್ದರಿಂದ  ಈ ಸತ್ಕಾರ್ಯಕ್ಕೆ ಶ್ರಮವಹಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. 

ಟ್ರಸ್ಟ್‌ನ ನಿರ್ದೇಶಕರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಮ್ಮ ತಮ್ಮ ಕೆಲಸಗಳಿಗಾಗಿ ಹಳ್ಳಿಯಿಂದ ನಗರಕ್ಕೆ ಬಂದಂತಹ ಬಡವರಿಗೆ ಒಂದು ತಿಂಗಳು ಮಜ್ಜಿಗೆ ವಿತರಿಸಿದ್ದು ಸಂತಸದ ವಿಷಯ. ಹಿಂದೆಲ್ಲಾ ಅಲ್ಲಲ್ಲಿ ಅರವಟ್ಟಿಗೆಗಳನ್ನು ಇಟ್ಟು, ದಣಿದು ಬಂದವರಿಗೆ ನೀರು ಕೊಡುತ್ತಿದ್ದರು. ಅದರಂತೆ ಕರುಣಾ ಟ್ರಸ್ಟ್ ಮಜ್ಜಿಗೆ ವಿತರಿಸುತ್ತಿರುವುದು ಶ್ಲ್ಯಾಘನೀಯ ಕಾರ್ಯವೆಂದು ಹರ್ಷ ವ್ಯಕ್ತಪಡಿಸಿದರು.

ದಾನಿಗಳಾದ ಸುನೀಲ್ ಮಾತನಾಡಿ, ನಾವು ಕೊಟ್ಟ ಹಣ ಸದುಪಯೋಗವಾಗಿದೆ ಎಂಬ ತೃಪ್ತಿ ನಮ್ಮಲ್ಲಿದೆ. ಮುಂದೆ ಟ್ರಸ್ಟ್‌ನ ಯಾವುದೇ ಸತ್ಕಾರ್ಯಗಳಿಗೆ ನಮ್ಮ ಸಹಾಯ, ಸಹಕಾರ ಖಂಡಿತಾ ಇದೆ. ಪ್ರತಿಯೊಬ್ಬರೂ ಟ್ರಸ್ಟಿನ ಉತ್ತಮ ಕಾರ್ಯಗಳಿಗೆ ಕೈ ಜೋಡಿಸೋಣ ಎಂದರು.

ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಸುಗಮವಾಗಿ ನಡೆಸಲು ಸಲಹೆ, ಮಾರ್ಗದರ್ಶನ, ಧನ ಸಹಾಯ, ಸಮಯದಾನ ನೀಡಿದಂತಹವರಿಗೆ ಕೃತಜ್ಞತೆ ಅರ್ಪಿಸಿದರು. ಮಧುಸೂದನ್ ಸ್ವಾಗತಿಸಿದರು.

error: Content is protected !!